ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ : ಐದು ಶತಮಾನಗಳಿಂದ ತಿಕ್ಕಾಟ, ಕೋರ್ಟ್ ವ್ಯಾಜ್ಯದ ನಂತರ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯಾಗುತ್ತಿರುವುದಕ್ಕೆ ಎಲ್ಲರೂ ಸಂಭ್ರಮಿಸಬೇಕಿದೆ ಎಂದು ಭೀಮಸೇತು ಮುನಿವೃಂದ ಮಠ ಭೀಮನಕಟ್ಟೆಯ ರಘುವರೇಂದ್ರ ತೀರ್ಥ ಶ್ರೀಪಾದಂಗಳವರು ಹೇಳಿದರು.
ಹರಿವಾಯು ಗುರು ಸೇವಾ ಟ್ರಸ್ಟ್ ವತಿಯಿಂದ ಹರಿವಾಯುಸ್ತುತಿ ಪಾರಾಯಣದ 23 ನೇ ವಾರ್ಷಿಕೋತ್ಸವ ನಿಮಿತ್ತ ವಾಸವಿ ವಿದ್ಯಾಸಂಸ್ಥೆ ಆವರಣದಲ್ಲಿ ಶನಿವಾರದಿಂದ ಆರಂಭಗೊಂಡಿರುವ ಹರಿದಾಸ ಹಬ್ಬ ಉದ್ಗಾಟಿಸಿ ಆಶೀರ್ವಚನ ನೀಡಿದರು.
ಅಧಿಕಾರ, ಸಂಪತ್ತಿನ ಯಾವ ಮದವು ಮರ್ಯಾದಾ ಪುರುಷ ರಾಮನಲ್ಲಿರಲಿಲ್ಲ. ಅಂತಹ ಯಾವುದಾದರೂ ಒಂದು ಗುಣವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಹರಿದಾಸ ಹಬ್ಬ ಆಚರಣೆಗೆ ನಿಜವಾದ ಅರ್ಥ ಸಿಗುತ್ತದೆ. ಮಹರ್ಷಿ ವಾಲ್ಮೀಕಿ ರಾಮಾಯಣದಲ್ಲಿ ರಾಮನ ಗುಣಗಳ ಪಟ್ಟಿ ಕೊಟ್ಟಿದ್ದಾರೆ. ಸ್ಥಿತಪೂರ್ವ ಭಾಷಿ ರಾಮನ ಗುಣ. ರಾಮರಾಜ್ಯ, ರಾಮನ ಪ್ರಾಣ ಪ್ರತಿಷ್ಟೆ ನಮ್ಮಲ್ಲಾಗಬೇಕು. ರಾಮ ಮತ್ತು ಕೃಷ್ಣ ಮನುಷ್ಯರಂತೆ ಬಾಳಿ ತೋರಿದ ಅವತಾರ ಪುರುಷರು. ಮನುಷ್ಯ ಹೇಗೆ ಬದುಕಬೇಕೆಂಬುದನ್ನು ಹೇಳಿಕೊಟ್ಟಿದ್ದು, ರಾಮ. ಚಂದ್ರನನ್ನು ಕಂಡರೆ ಮನಸ್ಸಿಗೆ ನೆಮ್ಮದಿಯಾಗುತ್ತದೆ. ಚಂದ್ರನಿಗೆ ಹುಟ್ಟುಂಟು. ಭಗವಂತನಿಗೆ ಹುಟ್ಟಿಲ್ಲ. ಕೃಷ್ಣನನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ ವಿಠಲ ನಾಮ ತುಪ್ಪವ ಬೆರೆಸಿ ಎನ್ನುವ ವಾಕ್ಯವುಂಟು. ರಾಮ ತನ್ನಲ್ಲಿನ ಸಾಮಥ್ರ್ಯದಿಂದ ಬೆಳೆದವನು. ದೇವರು ಅನುಗ್ರಹ ಮಾಡುವುದು ಭಕ್ತರಿಗೆ ಮಾತ್ರ. ಚಂದ್ರನಿಗಿಂತ ವಿಶಿಷ್ಟವಾದ ಗುಣ ರಾಮನಲ್ಲಿತ್ತು ಎಂದು ತಿಳಿಸಿದರು.
ಸುಖದ ಹಿಂದೆ ದುಃಖವಿದೆ. ಹರಿದಾಸರು ಸಂತೋಷ ಪಡುವ ಕಾಲವಿದು. ರಾಮ ಎಲ್ಲರಿಗೂ ಒಡೆಯ. ರಾಮರಾಜ್ಯ ಆಗಬೇಕು. ರಾಮನೆಂದರೆ ಪ್ರತಿಯೊಬ್ಬರಲ್ಲಿಯೂ ಎಲ್ಲಿಲ್ಲದ ಭಕ್ತಿ. ಏಕೆಂದರೆ ಅಂತಹ ಗುಣ ರಾಮನಲ್ಲಿತ್ತು ಎಂದು ಸ್ಮರಿಸಿದರು.
ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್.ಮಂಜುನಾಥ್ ಮಾತನಾಡಿ ಹರಿದಾಸ ಹಬ್ಬದ ಮೂಲಕ ಜ್ಞಾನ ವಿಕಾಸವಾಗಬೇಕು. ಜೀವನದಲ್ಲಿ ಏನು ಬದಲಾವಣೆ ತಂದುಕೊಂಡಿದ್ದೇವೆನ್ನುವುದು ಮುಖ್ಯ. ಮನುಷ್ಯ ಜೀವನ ಅತ್ಯಂತ ಶ್ರೇಷ್ಟ. ಧರ್ಮ, ಅಧರ್ಮ, ಹಿಂಸೆ ಇವೆಲ್ಲವು ರಾಜ-ಮಹಾರಾಜರುಗಳ ಕಾಲದಿಂದಲೂ ಇದೆ. ಆಸೆ-ದುರಾಸೆ ಇರುತ್ತದೆ. ಅತಿಯಾದರೆ ಒಂದಲ್ಲ ಒಂದು ರೀತಿಯ ಅನಾಹುತಗಳಾಗುತ್ತವೆ. ದೇಶದ ಪ್ರಧಾನಿ ನರೇಂದ್ರಮೋದಿರವರ ಆಡಳಿತದಲ್ಲಿ ರಾಮ ಮಂದಿರ ನಿರ್ಮಾಣ ಅಲ್ಪ ಕಾಲದಲ್ಲಿಯೇ ಆಗುತ್ತಿರುವುದನ್ನು ಎಲ್ಲರೂ ಮೆಚ್ಚಲೇಬೇಕು. ಮನುಷ್ಯ ಧರ್ಮದಿಂದ ನಡೆದಾಗ ಮಾತ್ರ ಒಳಿತಾಗಲಿದೆ ಎಂದು ಹೇಳಿದರು.
ಪೂರ್ಣಪ್ರಜ್ಞಾ ವಿದ್ಯಾಪೀಠ ಬೆಂಗಳೂರಿನ ವಿದ್ವಾನ್ ಕೃಷ್ಣರಾಜ ಕುತ್ಪಾಡಿ, ರಾಘವೇಂದ್ರಸ್ವಾಮಿ ಮಠದ ವ್ಯವಸ್ಥಾಪಕ ಪ್ರಾಣೇಶಾಚಾರ್ಯ ಕೊಪ್ರ, ಉತ್ತರಾಧಿ ಮಠದ ವ್ಯವಸ್ಥಾಪಕ ಉಪಾಧ್ಯ ಪ್ರಭಂಜನಾಚಾರ್ಯ ಕೊಸನೂರು, ನಗರಸಭೆ ಸದಸ್ಯ ಜಿ.ಹರೀಶ್, ಗುರುರಾಜ ಸೇವಾ ಸಂಘದ ಅಧ್ಯಕ್ಷ ವೇದವ್ಯಾಸಚಾರ್ಯ, ಬಡಗನಾಡು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎ.ಶೇಷಗಿರಿರಾವ್, ವೈಷ್ಣವಸಭಾ ಅಧ್ಯಕ್ಷ ಜಗದೀಶ್ ಜೆ.ಅಯ್ಯಂಗಾರ್, ಸದ್ಗುರು ಬ್ರಹ್ಮಚೈತನ್ಯ ಭಕ್ತ ಮಂಡಳಿ ಅಧ್ಯಕ್ಷ ಕಟೀಲ್ ದಿವಾಕರ್, ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಎ.ಸತ್ಯನಾರಾಯಣಶೆಟ್ಟಿ, ಆರ್ಯವೈಶ್ಯ ವಿದ್ಯಾಭಿವೃದ್ದಿ ಸಂಘದ ಅಧ್ಯಕ್ಷ ಪಿ.ಮೋಹನ್‍ಕುಮಾರ್ ಗುಪ್ತ, ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ.ಅನಂತರಾಮ್ ಗೌತಮ್, ಆರ್ಯವೈಶ್ಯ ಸಂಘದ ಅಧ್ಯಕ್ಷ ಎಲ್.ಇ.ಶ್ರೀನಿವಾಸಬಾಬು ವೇದಿಕೆಯಲ್ಲಿದ್ದರು.