ರಾಮಮಂದಿರಕ್ಕೆ ನಟ ಪ್ರಭಾಸ್ 50 ಕೋಟಿ ಕೊಟ್ಟಿದ್ದು ನಿಜಾನಾ ? ಇಲ್ಲಿದೆ ಸ್ಪಷ್ಟತೆ….!

ಸುದ್ದಿಒನ್ : ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಇಡೀ ದೇಶವೇ ರಾಮಭಕ್ತಿಯಲ್ಲಿ ಮುಳುಗಿ ಎಲ್ಲರ ಚಿತ್ತ ಅಯೋಧ್ಯೆಯತ್ತ ನೆಟ್ಟಿದೆ. ದೇಶದ ಪ್ರತಿಯೊಬ್ಬ ಭಕ್ತರು ರಾಮನ ಬಾಲ ರೂಪವಾದ ರಾಮ ಲಲ್ಲಾನನ್ನು ರಾಮಮಂದಿರದಲ್ಲಿ ಭೇಟಿ ಮಾಡಲು ಕಾತುರದಿಂದ ಕಾಯುತ್ತಿದ್ದಾರೆ. 

ನವೆಂಬರ್ 9, 2019 ರಂದು ಸುಪ್ರೀಂ ಕೋರ್ಟ್ ರಾಮ ಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿ ಆದೇಶ ನೀಡಿತ್ತು. ಇದಕ್ಕಾಗಿ ಟ್ರಸ್ಟ್ ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಲಾಗಿತ್ತು. ಆಗಸ್ಟ್ 5, 2020 ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಅದರ ನಂತರ ದೇವಾಲಯದ ನಿರ್ಮಾಣವು ಹಂತಹಂತವಾಗಿ ನಡೆಯಿತು. ಹಾಗೂ ಇದೇ ತಿಂಗಳ 22ರಂದು ರಾಮಮಂದಿರದ ಉದ್ಘಾಟನಾ ಸಮಾರಂಭ ನಡೆಯಲಿದೆ.

ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಹಲವರನ್ನು ಆಹ್ವಾನಿಸಲಾಗಿದೆ. ಅನೇಕ ರಾಜಕಾರಣಿಗಳು, ಉದ್ಯಮಿಗಳು ಮತ್ತು ಚಲನಚಿತ್ರ ನಟರ ಹೆಸರುಗಳು ಆಹ್ವಾನಿತ ಪಟ್ಟಿಯಲ್ಲಿವೆ. ಆಮಂತ್ರಣ ಪತ್ರಿಕೆಯ ಫೋಟೋ ಈಗಾಗಲೇ ವೈರಲ್ ಆಗಿದೆ.

ತೆಲುಗಿನ ರೆಬೆಲ್ ಸ್ಟಾರ್ ಪ್ರಭಾಸ್, ಮೆಗಾ ಪವರ್ ಸ್ಟಾರ್
ರಾಮ್ ಚರಣ್ ಮತ್ತು ಮೆಗಾ ಸ್ಟಾರ್ ಚಿರಂಜೀವಿ ಅವರನ್ನು ಆಹ್ವಾನಿಸಲಾಗಿದೆ. ಈ ನಡುವೆ ರಾಮಮಂದಿರ ನಿರ್ಮಾಣಕ್ಕೆ ಪ್ರಭಾಸ್ ಭಾರೀ ದೇಣಿಗೆ ನೀಡಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಬರುವ ಭಕ್ತರಿಗೆ ಪ್ರಭಾಸ್ ಅನ್ನಸಂತರ್ಪಣೆ ಮಾಡುತ್ತಿದ್ದು, ಸುಮಾರು 50 ಕೋಟಿ ಖರ್ಚು ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇತ್ತೀಚೆಗಷ್ಟೇ ಪ್ರಭಾಸ್ ತಂಡ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಇತ್ತೀಚೆಗೆ ಮಾಧ್ಯಮ ಸಂಸ್ಥೆಯೊಂದು ಪ್ರಭಾಸ್ ತಂಡವನ್ನು ಸಂಪರ್ಕಿಸಿದಾಗ, ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಬರುವ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲು ಪ್ರಭಾಸ್ ಕೋಟ್ಯಂತರ ರೂಪಾಯಿ ನೀಡಿದ್ದಾರೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅದು ಕೇವಲ ವದಂತಿಯಷ್ಟೇ ಎಂದು ಪ್ರಭಾಸ್ ತಂಡ ಹೇಳಿದೆ.

Share This Article
Leave a Comment

Leave a Reply

Your email address will not be published. Required fields are marked *