ಉಡುಪಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ ಸಿದ್ಧತೆ ನಡೆದ ಬೆನ್ನಲ್ಲೇ ರಾಜ್ಯದ ಉಡುಪಿ ಶ್ರೀಕೃಷ್ಣ ಮಠದಲ್ಲೂ ಸಿದ್ಧತೆಗಳು ನಡೆಯುತ್ತಿವೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೃಷ್ಣಮಠದಲ್ಲಿ ಸ್ವಚ್ಛತೆ ಮಾಡಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ರಾಮ ಎಲ್ಲರ ದೇವರು. ರಾಮನಿಗೆ ಜಾತಿ ಇಲ್ಲ. ರಾಮನಿಗೆ ಧರ್ಮ ಇಲ್ಲ. ಧರ್ಮ ಜಾತಿಯನ್ನು ಹೊರತುಪಡಿಸಿ ಈ ದೇಶದಲ್ಲಿ ರಾಮನನ್ನು ಆರಾಧನೆ ಮಾಡಬಹುದು. ಇಂಡೋನೇಷ್ಯಾ ಒಂದು ಮುಸಲ್ಮಾನರ ದೇಶ. ಆದರೆ ಅಲ್ಲಿ ರಾಮನ ಹೆಸರನ್ನು ಮಹಾಭಾರತದಲ್ಲಿರುವ ಮಹಾಪುರುಷರ ಹೆಸರುಗಳನ್ನು ಅಲ್ಲಿರುವ ಮಕ್ಕಳಿಗೆ ಇಡುತ್ತಾರೆ. ರಾಮನ ಕಥನ ನಡೆಯುತ್ತೆ. ಮುಸಲ್ಮಾನರ ದೇಶದಲ್ಲೂ ರಾಮಯಣ ನಡೆಯುತ್ತೆ, ಅದನ್ನ ಅಧ್ಯಯನ ಮಾಡುತ್ತಾರೆ. ಆದರೆ ನಮ್ಮ ದೇಶದಲ್ಲಿ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ, ಒಂದು ವರ್ಗದ ಮತೀಯ ಜನರನ್ನು ಒಲೈಕೆ ಮಾಡುವ ಕಾರಣಕ್ಕಾಗಿ ರಾಮನನ್ನು ತಿರಸ್ಕಾರ ಮಾಡುವಂತ, ಅಯೋಧ್ಯೆಯ ವಿರುದ್ಧ ಮಾತನಾಡುವಂತ ಒಂದು ಮಾನಸಿಕತೆ ನಿರ್ಮಾಣವಾಗಿದೆ.
ಇದು ಕೇವಲ ವೋಟ್ ಬ್ಯಾಂಕ್ ಗಾಗಿ ಎಂಬುದು ತಿಳಿಯುತ್ತೆ. ಯಾಕಂದ್ರೆ ಅವರ ಮನೆಗೆ ಹೋದರೆ ರಾಮನನ್ನು, ಕೃಷ್ಣನನ್ನು, ಶಿವನನ್ನು ಪೂಜೆ ಮಾಡುತ್ತಾರೆ. ಮನೆಯಿಂದ ಹೊರಗೆ ಹೋದರೆ ವೋಟ್ ಬೇಕು. ವೋಟ್ ಎಲ್ಲಿ ನಷ್ಟವಾಗುತ್ತೆ ಅಂತ ಬೇರೆ ಬೇರೆ ರಾಜಕೀಯ ಪಾರ್ಟಿಗಳು ಮಾಡುತ್ತಿದ್ದಾರೆ.
ಕಾಂಗ್ರೆಸ್ ನಾಯಕರು, ರಾಹುಲ್ ಗಾಂಧಿ ಸೇರಿ ಚುನಾವಣೆ ಬಂದಾಗ ಮಂದಿರ ಸುತ್ತುತ್ತಾರೆ. ಇಂಥ ಸಂದರ್ಭದಲ್ಲಿ, ಭವ್ಯವಾದ ದೇವಸ್ಥಾನ ಉದ್ಘಾಟನೆಯ ಸಂದರ್ಭದಲ್ಲಿ ಅದನ್ನು ತಿರಸ್ಕಾರ ಮಾಡುವುದನ್ನು ಮಾಡುತ್ತಾರೆ. ಇದನ್ನು ದೇಶದ ಜನ ಅರ್ಥ ಮಾಡಿಕೊಳ್ಳುತ್ತಾ ಇದ್ದಾರೆ. ಕಾಂಗ್ರೆಸ್ ಪಕ್ಷದ ಹಲವರಿಗೆ ರಾಮ ಮಂದಿರ ಉದ್ಘಾಟನೆಗೆ ಬರಬೇಕೆಂಬ ಆಸೆಯಿದ್ದರು ಕೂಡ ರಾಜಕೀಯದ ಕಾರಣದಿಂದಾಗಿ ದೂರ ಸರಿಯುತ್ತಾ ಇದ್ದಾರೆ. ಲೋಕಸಭಾ ಚುನಾವಣೆ ಬಳಿಕ ಎಲ್ಲರು ರಾಮಮಂದಿರಕ್ಕೆ ಭೇಟಿ ಕೊಟ್ಟೆ ಕೊಡುತ್ತಾರೆ, ದರ್ಶನ ಮಾಡಿಯೇ ಮಾಡುತ್ತಾರೆಂಬ ವಿಶ್ವಾಸ ಇದೆ ಎಂದಿದ್ದಾರೆ.