ಸ್ಯಾಂಡಲ್ ವುಡ್ ಕಂಚಿನ ಕಂಠದ ನಾಯಕ ವಸಿಷ್ಠ ಸಿಂಹನಿಗೆ, ನಿರ್ದೇಶಕನಿಂದ ಅನ್ಯಾಯವಾಗಿದೆ ಎನ್ನಲಾಗಿದೆ. ನಿರ್ದೇಶಕ ಸುಮಂತ್ ಕ್ರಾಂತಿಯಿಂದ ಅನ್ಯಾಯವಾಗಿದೆ ಎಂದು ನಟ ವಸಿಷ್ಠ ದಿಂಹ ಆರೋಪ ಮಾಡಿದ್ದಾರೆ. ಸಿನಿಮಾವನ್ನು ಥಿಯೇಟರ್ ನಲ್ಲಿ ರಿಲೀಸ್ ಮಾಡದೆ, ಯಾವುದೇ ಮಾಹಿತಿಯನ್ನು ನೀಡದೆ ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಿದ್ದಾರೆಂದು ಬೇಸರ ಹೊರ ಹಾಕಿದ್ದಾರೆ.
ವಸಿಷ್ಠ ಸಿಂಹ ಅಭಿನಯದ ‘ಕಾಲಚಕ್ರ’ ಸಿನಿಮಾ 2018ರಲ್ಲಿ ಸೆಟ್ಟೇರಿತ್ತು. ಸುಮಂತ್ ಕ್ರಾಂತಿ ನಿರ್ದೇಶನ ಮಾಡಿದ್ದರು. ರಶ್ಮಿ ಕೆ ಎಂಬುವವರು ಸಿನಿಮಾಗೆ ಬಂಡವಾಳ ಹೂಡಿದ್ದರು. ಸುಮಾರು ಐದು ವರ್ಷಗಳೇ ಕಳೆದಿದೆ. ಈಗ ದಿಢೀರನೇ ಯೂಟ್ಯೂಬ್ ನಲ್ಲಿ ಸಿನಿಮಾ ರಿಲೀಸ್ ಮಾಡಿರುವುದು ನಟನ ಬೇಸರಕ್ಕೆ ಕಾರಣವಾಗಿದೆ.
ನಟ ವಸಿಷ್ಠ ಸಿಂಹನಿಗೆ ಒಂದು ಮಾತು ತಿಳಿಸದೆ ಸಿನಿಮಾವನ್ನು ರಿಲೀಸ್ ಮಾಡಲಾಗಿದೆ. ಇದಕ್ಕೆ ಕೆಂಡಾಮಂಡಲರಾಗಿರುವ ನಟ ವಸಿಷ್ಠ ಸಿಂಹ, ಮುಂದೆ ಯಾವ ನಟರಿಗೂ ಈ ರೀತಿಯ ಅನ್ಯಾಯವಾಗಬಾರದು ಎಂದೇ ಹೇಳಿದ್ದಾರೆ. ಮುಂದೆ ಯಾವುದೇ ಸಿನಿಮಾವಾದರೂ ಅಗ್ರಿಮೆಂಟ್ ಕ್ಲಿಯರ್ ಆಗಿ ಮಾಡಬೇಕು. ಇಲ್ಲ ಅಂದ್ರೆ ಇಂಥ ಸಮಸ್ಯೆಯಾಗುತ್ತದೆ. ಚಿತ್ರತಂಡದಿಂದ ಅನ್ಯಾಯವಾಗಿದೆ. ಮುಂದೆ ಎಲ್ಲಾ ನಟರು ಈ ಸಂಬಂಧ ಎಚ್ಚೆತ್ತುಕೊಳ್ಳಬೇಕು. ಹಣಕ್ಕೋಸ್ಕರ ಎಲ್ಲಾ ಸಿನಿಮಾಗಳನ್ನು ಮಾಡಲ್ಲ. ಪ್ರೀತಿ, ವಿಶ್ವಾಸಕ್ಕೋಸ್ಕರನು ಸಿನಿಮಾಗಳಲ್ಲಿ ಅಭಿನಯಿಸುತ್ತೇವೆ. ಏನೇ ದ್ವೇಷ ಆದರೂ ಈ ರೀತಿ ಕೆಲಸ ಮಾಡಬಾರದು ಎಂದಿದ್ದಾರೆ.
ಕಾಲಚಕ್ರ ಸಿನಿಮಾ ಅನೌನ್ಸ್ ಆಗಿ ನಾಲ್ಕೈದು ವರ್ಷಗಳೇ ಕಳೆದರು ಥಿಯೇಟರ್ ಭಾಗ್ಯ ಕಂಡಿರಲಿಲ್ಲ. ವಸಿಷ್ಠ ಸಿಂಹ ಅಭಿಮಾನಿಗಳು ಕಾದಿದ್ದೇ ಆಗಿತ್ತು. ಆದರೆ ಯಾವುದೇ ಮಾಹಿತಿ ಇಲ್ಲದೆ ಇದೀಗ ನಿರ್ದೇಶಕ ಸುಮಂತ್ ಕ್ರಾಂತಿ ಸಿನಿಮಾವನ್ನು ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ.