ಸುದ್ದಿಒನ್, ಚಿತ್ರದುರ್ಗ, ಜನವರಿ.16 : ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಅವರ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ರಾಜ್ಯ ಸರ್ಕಾರದಿಂದಲೇ ರೈತರಿಗೆ ಗರಿಷ್ಟ 2 ಸಾವಿರ ಪರಿಹಾರವನ್ನು ಪಾವತಿಸಲು ಅಗತ್ಯ ದತ್ತಾಂಶವನ್ನು ಈಗಾಗಲೆ ಸಲ್ಲಿಸಲಾಗಿದ್ದು, ಶೀಘ್ರವೇ ಪರಿಹಾರ ಮೊತ್ತ ರೈತರಿಗೆ ಪಾವತಿಯಾಗಲಿದೆ ಎಂದು ಜಂಟಿಕೃಷಿ ನಿರ್ದೇಶಕ ಮಂಜುನಾಥ್ ತಿಳಿಸಿದರು.
ಮಳೆಯ ಕೊರತೆಯಿಂದಾಗಿ ಜಿಲ್ಲೆಯ 06 ತಾಲ್ಲೂಕುಗಳನ್ನು ಈಗಾಗಲೆ ಬರ ಪೀಡಿತ ಪ್ರದೇಶವೆಂದು ಘೋಷಿಸಲಾಗಿದ್ದು, ಜಿಲ್ಲೆಯಲ್ಲಿ 2.35 ಲಕ್ಷ ಹೆ. ನಲ್ಲಿ ಬೆಳೆ ಹಾನಿಯಾಗಿದೆ.
ಹೀಗಾಗಿ ನಿಯಮಾನುಸಾರ ಇನ್‍ಪುಟ್ ಸಬ್ಸಿಡಿ ನೀಡುವಂತೆ ಜಿಲ್ಲೆಯಿಂದ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಬೆಳೆ ಪರಿಹಾರ ಪಾವತಿಯಲ್ಲಿ ದುರುಪಯೋಗ ತಡೆಯಲು ಈ ಬಾರಿ ಫ್ರುಟ್ಸ್ ತಂತ್ರಾಂಶ ಹಾಗೂ ಬೆಳೆ ಕಟಾವು ಸಮೀಕ್ಷೆ ಆಧಾರದಲ್ಲಿ ಪರಿಹಾರವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿಗಳು ಮಾತನಾಡಿ, ಫ್ರುಟ್ಸ್ ತಂತ್ರಾಂಶದಲ್ಲಿ ಮಾಹಿತಿ ಜೋಡಣೆ ಕಾರ್ಯ ಜಿಲ್ಲೆಯಲ್ಲಿ ಈಗಾಗಲೆ ಶೇ. 81 ರಷ್ಟು ಪೂರ್ಣಗೊಂಡಿದ್ದು, ರೈತ ಸಮುದಾಯದಲ್ಲಿ ಈ ಬಗ್ಗೆ ವ್ಯಾಪಕ ತಿಳುವಳಿಕೆ ನೀಡುವ ಕಾರ್ಯ ನಡೆಯುತ್ತಿದೆ ಎಂದರು.