ತುಮಕೂರು: ಈಗಾಗಲೇ ಎಲ್ಲೆಡೆ ಲೋಕಸಭಾ ಚುನಾವಣೆಯ ರಂಗು ಗರಿಗೆದರಿದೆ. ಸಿದ್ಧತೆಗಳು ನಡೆಯುತ್ತಿದ್ದು, ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗುತ್ತಿದ್ದಾರೆ. ಈ ಬಾರಿಯ ಮತ್ತೊಂದು ವಿಶೇಷವೆಂದರೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಡು ಚುನಾವಣೆ ಎದುರಿಸಲು ಸಿದ್ಧತೆ ನಡೆಸಿದೆ. ತುಮಕೂರು ಲೋಕಸಭಾ ಕ್ಷೇತ್ರಕ್ಕೂ ಜೆಡಿಎಸ್ ಬೇಡಿಕೆ ಇಡುವ ಸಾಧ್ಯತೆ ಇದೆ. ಇದರ ಬೆನ್ನಲ್ಲೇ ಬಿಜೆಪಿಯಲ್ಲಿಯೇ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಗಾಗಿ ಪೈಪೋಟಿ ನಡೆಯುತ್ತಿದೆ.
ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿ ಕಣಕ್ಕಿಳಿಯುತ್ತಾರಾ ಅಥವಾ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಯುತ್ತಾರಾ ಎಂಬುದು ಕೂಡ ಇನ್ನು ನಿರ್ಧಾರವಾಗಿಲ್ಲ. ಇದೆ ತಿಂಗಳ 20ರ ನಂತರ ಕುಮಾರಸ್ವಾಮಿ ಅವರು ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡಿ ಬಂದ ನಂತರವಷ್ಟೇ ಸ್ಪಷ್ಟತೆ ಸಿಗಲಿದೆ.
ಜೆಸಿ ಮಾಧುಸ್ವಾಮಿ ಅವರು ಕೂಡ ಈಗ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಯ ಅಖಾಡಕ್ಕೆ ಎಂಟ್ರಿಯಾಗಿದ್ದಾರೆ. ನಾನು ಕೂಡ ಅಭ್ಯರ್ಥಿಯ ಆಕಾಂಕ್ಷಿಯಾಗಿದ್ದೀನಿ, ಟಿಕೆಟ್ ಕೇಳಿದ್ದೀನಿ ಎಂದು ಹೇಳುವ ಮೂಲಕ ಲೋಕಸಭಾ ಚುನಾವಣೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಮುದ್ದಹನುಮೇಗೌಡರು ಚುನಾವಣೆಯ ಹೊತ್ತಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂಬ ಮಾತಿದೆ. ಹೀಗಾಗಿಯೇ ಜೆಸಿ ಮಾಧುಸ್ವಾಮಿ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಬಿಜೆಪಿ ಪಾಳಯದಲ್ಲಿ ವಿ ಸೋಮಣ್ಣ ಅವರನ್ನೇ ತುಮಕೂರಿನಿಂದ ನಿಲ್ಲಿಸಬೇಕು ಎಂಬ ಯೋಚನೆಯಲ್ಲಿದೆ. ಬಿಎಸ್ ಯಡಿಯೂರಪ್ಪ ಅವರ ಬೆಂಬಲ ಇರುವ ಮಾಧುಸ್ವಾಮಿ ಅವರಿಗೆ ತುಮಕೂರಿನ ಬಿಜೆಪಿಯ ಒಂದು ತಂಡದ ಬೆಂಬಲವಿದೆ. ಈ ಎಲ್ಲಾ ಹಗ್ಗಜಗ್ಗಾಟದ ನಡುವೆ ಯಾರಿಗೆ ಹೈಕಮಾಂಡ್ ಟಿಕೆಟ್ ನೀಡಲಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಅದರಲ್ಲೂ ವಿ ಸೋಮಣ್ಣ ಅವರು ದೆಹಲಿಗೆ ಹೋಗಿ ಬಂದ ಮೇಲೆ ನಾನು ಕೂಡ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಿರುವುದು, ಹೈಕಮಾಂಡ್ ನಿಂದಾನೇ ಬಂದ ಸೂಚನೆ ಆಗಿರಬಹುದಾ ಎಂಬ ಚರ್ಚೆಯನ್ನು ಹುಟ್ಟು ಹಾಕಿದೆ.