ಚಿತ್ರದುರ್ಗ. ಜ.13: ನ್ಯಾಯಾಲಯಗಳು ಅಪರಾಧ ನಿರ್ಣಯ ಕೈಗೊಳ್ಳುವಲ್ಲಿ ಪರಿಣಾಮಕಾರಿ ತನಿಖೆಯ ಪಾತ್ರ ಮಹತ್ವದ್ದಾಗಿದೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಚಿತ್ರದುರ್ಗ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಪೊಲೀಸ್ ವತಿಯಿಂದ ನ್ಯಾಯಾಂಗ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ ಅಪರಾಧ ಪ್ರಕ್ರಿಯೆ ಸಂಹಿತೆ (ಸಿಆರ್‍ಪಿಸಿ) ಹಾಗೂ ಎನ್.ಡಿ.ಪಿ.ಎಸ್ ಕಾಯ್ದೆ ಕುರಿತು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಗುರುತರ ಅಪರಾಧ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ಪ್ರಮಾಣ ಅತ್ಯಂತ ಕಡಿಮೆಯಿದೆ. ಇದಕ್ಕೆ ಕಾರಣ ನ್ಯಾಯಾಧೀಶರ ಮುಂದೆ ಪ್ರಕರಣದ ತನಿಖೆ ಹಾಗೂ ಸಾಕ್ಷಿಗಳನ್ನು ಸರಿಯಾದ ರೀತಿಯಲ್ಲಿ ಪ್ರಸುತ್ತ ಪಡಿಸದಿರುವುದೇ ಆಗಿದೆ. ಇಂದಿಗೂ ಜನಸಾಮಾನ್ಯರು ಪೊಲೀಸ್ ಠಾಣೆ ಆಗಮಿಸಿ ತಮ್ಮ ದೂರುಗಳನ್ನು ದಾಖಲಿಸಲು ಹಿಂದೇಟು ಹಾಕುತ್ತಾರೆ. ಇದಕ್ಕೆ ಮುಖ್ಯ ಕಾರಣ ಪೊಲೀಸರು ಸಾರ್ವಜನಿಕರೊಂದಿಗೆ ವರ್ತಿಸುವ ರೀತಿ. ಬೇರೆ ಯಾವ ದಾರಿ ಕಾಣದವರು ಪೊಲೀಸ್ ಹಾಗೂ ನ್ಯಾಯಾಲಯಗಳಿಗೆ ನ್ಯಾಯ ಅರಸಿ ಬರುತ್ತಾರೆ. ಪೊಲೀಸರು ಅವರೊಂದಿಗೆ ಸಾವಧಾನದಿಂದ ವರ್ತಿಸಬೇಕು. ಕಾನೂನಿನ ನಿಯಮಗಳನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು ವಿಚಾರಣೆ ನಡೆಸಬೇಕು ಎಂದು ತಿಳಿಸಿದರು.
ಪೊಲೀಸರು ತಮಗೆ ಕೊಟ್ಟಿರುವ ಅಧಿಕಾರವನ್ನು ಸೂಕ್ತ ರೀತಿಯಲ್ಲಿ ಬಳಸಿ ವಿಚಾರಣೆ ನಡೆಸಬೇಕು. ಯಾವುದೇ ರೀತಿಯ ಪೂರ್ವಾಗ್ರಹ ಹಾಗೂ ಒತ್ತಡಗಳಿಗೆ ಒಳಗಾಗಬಾರದು. ನ್ಯಾಯದಾನ ವ್ಯವಸ್ಥೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲ್ಲಿ ಪೊಲೀಸರು ಪ್ರಮುಖ ಪಾತ್ರ ವಹಿಸುತ್ತಾರೆ. ಹಾಗೇ ಪ್ರತಿಯೊಬ್ಬರ ಹಕ್ಕುಗಳನ್ನು ರಕ್ಷಿಸುವ ಜವಾಬ್ದಾರಿಯೂ ಪೊಲೀಸರ ಮೇಲಿದೆ ಎಂದರು.
ದೇಶದ ನ್ಯಾಯಾಂಗ ವ್ಯವಸ್ಥೆ ಯಾವುದೇ ಒತ್ತಡಗಳಿಗೆ ಒಳಗಾಗದೆ ಕಾರ್ಯನಿರ್ವಹಿಸುವುದಕ್ಕೆ ಹೆಸರುವಾಸಿಯಾಗಿದೆ. ಈ ಪರಂಪರೆಯನ್ನು ಮುಂದುವರೆಸುವುದರ ಜೊತೆಗೆ ಇನ್ನಷ್ಟು ಬಲಪಡಿಸಬೇಕಿದೆ. ತಂತ್ರಜ್ಞಾನ ಅಭಿವೃದ್ಧಿ ಹಾಗೂ ಸಮಾಜದಲ್ಲಿ ಬದಲಾವಣೆಗಳಿಗೆ ಅನುಗುಣವಾಗಿ ನ್ಯಾಯಾಂಗ ವ್ಯವಸ್ಥೆ ವಿಕಾಸ ಹೊಂದಬೇಕಾಗಿದೆ. ಈವರೆಗಿನ ನ್ಯಾಯಂಗ ವ್ಯವಸ್ಥೆಯಲ್ಲಿ ಬದಲಾವಣೆ ಪ್ರಗತಿದಾಯಕವಾಗಿದೆ. ಆದಾಗ್ಯೂ ಇನ್ನೂ ತೀವ್ರವಾಗಿ ಪ್ರಗತಿ ಸಾಧಿಸಬೇಕಿದೆ ಎಂದು ಅಭಿಪ್ರಾಯ ಪಟ್ಟರು.
ನ್ಯಾಯಾಧೀಶರು ತಮ್ಮ ವೃತ್ತಿಯಲ್ಲಿ ನಾಲ್ಕು ವಿಷಯಗಳನ್ನು ಪಾಲಿಸಬೇಕು. ಪ್ರಕರಣಗಳನ್ನು ಸಹಾನುಭೂತಿಯಿಂದ ಆಲಿಸಿ, ಬುದ್ಧಿವಂತಿಕೆಯಿಂದ ಉತ್ತರಿಸಬೇಕು. ಪ್ರತಿಯೊಂದು ವಿಷಯಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಇದರ ಆಧಾರದಲ್ಲಿ ನಿಷ್ಪಕ್ಷಪಾತವಾಗಿ ತೀರ್ಮಾನ ಕೈಗೊಳ್ಳಬೇಕು. ಇವುಗಳ ಜೊತೆಗೆ ಐದನೆಯದಾಗಿ ಪ್ರತಿಯೊಬ್ಬ ನ್ಯಾಯಾಧೀಶರು ವಕೀಲರ ಹಾಗೂ ಅರ್ಜಿದಾರರ ಮನವಿಯನ್ನು ತಾಳ್ಮೆಯಿಂದ ಆಲಿಸಬೇಕು.
ಕೆಲವು ಬಾರಿ ವಕೀಲರ ವಾದ ಹಾಗೂ ಅರ್ಜಿದಾರರ ಮನವಿಯಲ್ಲಿ ಹುರುಳು ಇಲ್ಲದಿರಬಹುದು. ಪ್ರಕರಣದ ಹೊರತಾಗಿನ ವಿಷಯಗಳನ್ನು ಸಹ ಪ್ರಸ್ತಾಪಿಸಬಹುದು. ನೀವು ತಾಳ್ಮೆಯಿಂದ ಆಲಿಸದೇ ಹೋದರೆ ಅವರಲ್ಲಿ ನ್ಯಾಯಾಂಗ ವ್ಯವಸ್ಥೆ ಮೇಲಿನ ಭರವಸೆ ಕಡಿಮೆಯಾಗುತ್ತದೆ. ಆದ್ದರಿಂದ ತಾಳ್ಮೆಯಿಂದ ಆಲಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಚಿತ್ರದುರ್ಗ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ನ್ಯಾಯಾಧೀಶರಿಗೆ ಸಲಹೆ ನೀಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಹೇಳಿದಂತೆ ಎಷ್ಟೇ ಉತ್ತಮ ಸಂವಿಧಾನ ಅಥವಾ ಕಾನೂನು ಇದ್ದರೂ, ಅದನ್ನು ಜಾರಿ ಮಾಡುವವರು ಸರಿಯಿಲ್ಲದಿದ್ದರೆ ಅದು ವ್ಯರ್ಥವಾಗುತ್ತದೆ. ಈ ಮಾತು ಪ್ರಾಯೋಗಿಕವಾಗಿ ಇದು ಹೇಗೆ ಹೆಚ್ಚು ಅನ್ವಯಿಕವಾಗುತ್ತವೆ ಎಂಬುದು ಎಲ್ಲಾ ನ್ಯಾಯಧೀಶರು ಹಾಗೂ ಪ್ರಕರಣಗಳ ತನಿಖೆ ನಡೆಸುವ ಪೊಲೀಸ್ ಅಧಿಕಾರಿಗಳಿಗೆ ಹೆಚ್ಚು ಅನುಭವಕ್ಕೆ ಬಂದಿರುತ್ತದೆ. ನ್ಯಾಯಾಂಗ ವ್ಯವಸ್ಥೆ ಇತರೆ ಪಾಲುದಾರ ಸಂಸ್ಥೆಗಳ ಸಹಾಯ ಇಲ್ಲದೆ ಏಕಾಂಗಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ.
ಪ್ರಜಾಪ್ರಭುತ್ವ ನಾಲ್ಕು ಆಧಾರ ಸ್ಥಂಭಗಳಾದ ಶಾಸಕಾಂಗ, ಕಾಯಾರ್ಂಗ, ನ್ಯಾಯಾಂಗ ಹಾಗೂ ಮಾಧ್ಯಮಗಳು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಸಮಾನ ಪಾತ್ರ ಹೊಂದಿವೆ. ಈ ಎಲ್ಲಾ ಅಂಗಗಳು ಸೇರಿ ನ್ಯಾಯದಾನ ಪ್ರಕ್ರಿಯೆ ಸರಿಯಾಗಿ ಜಾರಿಯಾಗಲು ಅತಿಮುಖ್ಯ ಪಾತ್ರವಹಿಸುತ್ತವೆ. ನ್ಯಾಯ ಅರಸಿ ನ್ಯಾಯಾಲಯಗಳಿಗೆ ಬರುವ ಅರ್ಜಿದಾರರಿಗೆ ನ್ಯಾಯದಾನ ಒದಗಿಸುವಲ್ಲಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ನ್ಯಾಯಾಲಯಗಳು ಪ್ರಮುಖ ಪಾತ್ರವಹಿಸುತ್ತವೆ. ಉನ್ನತ ನ್ಯಾಯಾಲಯಗಳ ಹಾಗೇ ಎಲ್ಲಾ ಹಂತದ ನ್ಯಾಯಾಲಯದ ನ್ಯಾಯಾಧೀಶರಿಗೂ ನ್ಯಾಯದಾನ ಮಾಡುವ ಹಕ್ಕನ್ನು ಸಂವಿಧಾನ ನೀಡಿದೆ. ಉತ್ತಮ ನ್ಯಾಯದಾನ ವ್ಯವಸ್ಥೆ ಉತ್ತಮ ಸಮಾಜದ ಗುಣಮಟ್ಟದ ಚಿಹ್ನೆಯಾಗಿದೆ ಎಂದರು.
ನಿವೃತ್ತ ಜಿಲ್ಲಾ ನ್ಯಾಯಾಧೀಶರು ಹಾಗೂ ಸಂಪನ್ಮೂಲ ವ್ಯಕ್ತಿ ಎಸ್.ಆರ್.ಸೋಮಶೇಖರ್ ಅವರು ಅಪರಾಧ ಪ್ರಕ್ರಿಯೆ ಸಂಹಿತೆ ಹಾಗೂ ಎನ್.ಡಿ.ಪಿ.ಎಸ್ ಕಾಯ್ದೆ ಕುರಿತು ಉಪನ್ಯಾಸ ನೀಡಿದರು.
ಕಾರ್ಯಾಗಾರದಲ್ಲಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶೆ ಕೆ.ಬಿ.ಗೀತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧಮೇರ್ಂದರ್ ಕುಮಾರ್ ಮೀನಾ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ತಿಮ್ಮಪ್ಪ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಸೇರಿದಂತೆ ನ್ಯಾಯಾಂಗ ಹಾಗೂ ಪೊಲೀಸ್ ಅಧಿಕಾರಿಗಳು ಇದ್ದರು.