ತುಮಕೂರು: ಲಂಚ ಸ್ವೀಕರಿಸುವುದು ಮಹಾಪರಾಧ ಅನ್ನೋದು ಎಲ್ಲಾ ಅಧಿಕಾರಿಗಳಿಗೂ ಗೊತ್ತು. ಆದ್ರೆ ಕೆಲವೊಂದಿಷ್ಟು ಅಧಿಕಾರಿಗಳ ಲಂಚದ ದಾಹ ಕಡಿಮೆಯಾಗುವ ಹಾಗೇ ಕಾಣೋಲ್ಲ. ಆದ್ರೆ ಜಿಲ್ಲೆಯಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಲಂಚ ತೆಗೆದುಕೊಳ್ಳುವಾಗಲೇ ಸಿಕ್ಕಿಬಿದ್ದ ಪಿಎಸ್ಐ ಅಧಿಕಾರಿಗಳಿಂದ ಕಣ್ತಪ್ಪಿಸಿಕೊಂಡು ಓಡಿದ್ದಾನೆ.
ಸಿ ಎಸ್ ಪುರ ಠಾಣೆಯಲ್ಲಿ ಚಂದ್ರಪ್ಪ ಎಂಬುವವರ ವಿರುದ್ಧ ಕೌಟುಂಬಿಕ ಕಲಹದ ಕೇಸ್ ದಾಖಲಾಗಿತ್ತು. ಈ ವೇಳೆ ಚಂದ್ರಪ್ಪ ಅವರ ಕಾರನ್ನು ವಶಪಡಿಸಿಕೊಳ್ಳಲಾಗಿತ್ತು. ಬಳಿಕ ಜಾಮೀನು ಪಡೆದ ಚಂದ್ರಪ್ಪ ಕಾರನ್ನ ಬಿಡಿಸಿಕೊಳ್ಳಲು ಸ್ಟೇಷನ್ ಗೆ ಹೋಗಿದ್ದರು. ಆದ್ರೆ ಅಲ್ಲಿ ಪೇದೆ ಮೂಲಕ 28 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರಂತೆ.
ಆ ಬಳಿಕ ಪಿಎಸ್ಐ ಸೋಮಶೇಖರ್ ಗೆ ಮೊದಲ ಕಂತಾಗಿ 12 ಸಾವಿರ ಹಣ ನೀಡಿದ್ದರಂತೆ ಚಂದ್ರಪ್ಪ. ಇವತ್ತು ಇನ್ನುಳಿದ 16 ಸಾವಿರ ಹಣ ನೀಡುವಾಗ ರೆಡ್ ಹ್ಯಾಂಡಾಗಿ ಎಸಿಬಿ ಅಧಿಕಾರಿಗಳ ಬಲೆಗೆ ಸೋಮಶೇಖರ್ ಬಿದ್ದಿದ್ದಾರೆ. ಚಂದ್ರಪ್ಪ ಲಂಚದ ಬಗ್ಗೆ ಎಸಿಬಿ ಅಧಿಕಾರಿಗಳಿಗೆ ಈ ಮೊದಲೇ ದೂರು ನೀಡಿದ್ದರು ಎನ್ನಲಾಗಿದೆ.
ದಾಳಿ ನಡೆಸಿದ ಬಳಿಕ ಪಿಎಸ್ ಹಾಗೂ ಕಾನ್ಸ್ಟೇಬಲ್ ನಯಾಜ್ ನನ್ನು ವಿಚಾರಣೆ ಮಾಡಿದ್ದಾರೆ. ಊಟದ ಸಮಯವಾದ್ದರಿಂದ ಅಧಿಕಾರಿಗಳು ಊಟ ಮಾಡಲು ತೆರಳಿದ ಸಮಯವನ್ನೇ ಕಾದು ಪಿಎಸ್ಐ ಸೋಮಶೇಖರ್ ತಮ್ಮ ಫೋನ್ ಎತ್ತುಕೊಂಡು ಪರಾರಿಯಾಗಿದ್ದಾನೆ. ಅಧಿಕಾರಿಗಳು ಕೂಡ ಪಿಎಸ್ಐ ಹಿಂದೆಯೇ ಓಡಿದ್ದಾರೆ ಆದರೇ ಯಾವುದೇ ಪ್ರಯೋಜನವಾಗಿಲ್ಲ. ಪಿಎಸ್ಐ ತಪ್ಪಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾನೆ.