ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜನವರಿ. 11 : ಇತ್ತೀಚೆಗೆ ಕ್ಲಿನಿಕ್‍ಗಳ ಮೇಲೆ ದಾಳಿ ನಡೆಸಿ ನಕಲಿ ವೈದ್ಯರು ಎಂದು ಬಿಂಬಿಸುತ್ತಿರುವುದನ್ನು ವಿರೋಧಿಸಿ ಆಯುಷ್ ಫೆಡರೇಷನ್ ಆಫ್ ಇಂಡಿಯಾ ಜಿಲ್ಲಾ ಶಾಖೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಕಚೇರಿ ಸಹಾಯಕರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಪ್ರಾಕ್ಟಿಷನರ್ ಮೆಡಿಕಲ್ ಎಸ್ಟಾಬ್ಲಿಷ್‍ಮೆಂಟ್ ಕಾಯ್ದೆಯನ್ವಯ ನೊಂದಣಿಯಾಗಿರುವ ವೈದ್ಯರುಗಳ ಮೇಲೆ ದಾಳಿ ನಡೆಸಿ ನಕಲಿ ಎನ್ನುತ್ತಿರುವುದು ನಿಲ್ಲಬೇಕು.
ಅಧಿಕಾರಿಗಳು ದಾಳಿ ನಡೆಸುವ ಸಂದರ್ಭದಲ್ಲಿ ವೈದ್ಯರುಗಳೆನ್ನುವ ಗೌರವವನ್ನು ಕೊಡದೆ ಕೈಗೆ ಸಿಕ್ಕ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿಯಾಗಿಸಿ ಕಿರುಕುಳ ನೀಡುತ್ತಿರುವುದು ವೈದ್ಯಕೀಯ ಲೋಕಕ್ಕೆ ಅಪಮಾನ ಮಾಡಿದಂತಾಗುತ್ತದೆ. ವೈದ್ಯರ ಕುಂದುಕೊರತೆ ವಿಚಾರಣಾ ಸಮಿತಿಗೆ ಆಯುಷ್ ಹಾಗೂ ಆಯುರ್ವೇದ ವ್ಯದ್ಯರೊಬ್ಬರನ್ನು ನೇಮಕ ಮಾಡಿಕೊಳ್ಳಬೇಕೆಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಆಯುಷ್ ಫೆಡರೇಷನ್ ಆಫ್ ಇಂಡಿಯಾ ಜಿಲ್ಲಾ ಶಾಖೆ ಅಧ್ಯಕ್ಷ ಡಾ.ಗೋಪಾಲಕೃಷ್ಣ ಜಿ.ಎಸ್. ಆಗ್ರಹಿಸಿದರು.
ಆಯುಷ್ ಫೆಡರೇಷನ್ ಆಫ್ ಇಂಡಿಯಾ ಜಿಲ್ಲಾ ಶಾಖೆಯ ಕಾರ್ಯದರ್ಶಿ ಡಾ. ಮಹಮದ್ ಖಾಸಿಂ, ಆಯುಷ್ ವೈದ್ಯರುಗಳಾದ ಲಿಂಗದೊರೆ, ಪ್ರಶಾಂತ್, ಮಂಜುನಾಥ, ಸಿರಿಯಣ್ಣ, ಉಮೇಶ್, ಶಂಕರ್‍ನಾರಾಯಣ್, ದಿವ್ಯಾ ಸೇರಿದಂತೆ ನೂರಾರು ವೈದ್ಯರುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.