ಬೆಂಗಳೂರು: ಶ್ರೀರಾಮನ ವಿಚಾರವನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ. ಯಾರೂ ಕೂಡ ರಾಮಚಂದ್ರನಿಗೆ ವಿರುದ್ಧವಾಗಿಲ್ಲ. ಬಿಜೆಪಿಯವರು ಶ್ರೀರಾಮನನ್ನು ದೊಡ್ಡ ರಾಜಕೀಯ ವಿಚಾರವನ್ನಾಗಿ ಮಾಡಿಕೊಂಡಿರುವುದಕ್ಕೆ ನಮ್ಮ ವಿರೋಧವಿದೆ ಎಂದಿದ್ದಾರೆ.
ನಾವೂ ರಾಮಮಂದಿರವನ್ನು ಕಟ್ಟಿದ್ದೇವೆ. ರಾಮನನ್ನು ಪೂಜಿಸಿ, ಭಜಿಸಿದ್ದೇವೆ. ಆದರೆ ದೇವರ ಹೆಸರಲ್ಲಿ ರಾಜಕೀಯವಾಗಿ ವಿರೋಧವಾಗಿದ್ದೇವೆ ಅಷ್ಟೆ. ಸರ್ಕಾರದ ವತಿಯಿಂದ ದೇವಸ್ಥಾನಗಳಲ್ಲಿ ವಿಶೇಷವಾಗಿ ಪೂಜೆ ಸಲ್ಲಿಸಿ ಎಂದು ನಾವೂ ಸೂಚಿಸಿಲ್ಲ. ಬಿಜೆಪಿಯವರು ಅಯೋಧ್ಯೆಗೆ ಏಕೆ ಹೋಗುತ್ತಾರೆ. ಯಾಕೆ ಶ್ರೀರಾಮ ಇಲ್ಲಿ ಇಲ್ಲವೆ. ಇಲ್ಲಿರುವ ಶ್ರೀರಾಮನಿಗೆ ಬೆಲೆ ಇಲ್ಲವೆ. ಇಲ್ಲಿಯೂ ಪೂಜೆ ನಡೆಯಲಿದೆ ಎಂದಿದ್ದಾರೆ.
ನಾವೆಲ್ಲರೂ ಶ್ರೀರಾಮಚಂದ್ರರಾಮನ ಭಕ್ತರೇ. ಬಿಜೆಪಿ ರಾಜಕೀಯವಾಗಿ ಮಾತನಾಡುತ್ತಿದ್ದು, ಅದಕ್ಕೆ ಔಷಧಿ ಇಲ್ಲ. ಮಂದಿರ ಉದ್ಘಾಟನೆಯ ಬಗ್ಗೆ ಪಕ್ಷದ ನಿಲುವನ್ನು ಸ್ವಾಗತಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಪಕ್ಷದ ತೀರ್ಮಾನವೇ ನಮ್ಮ ತೀರ್ಮಾನ” ಎಂದರು. ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಗೆ ಕಾಂಗ್ರೆಸ್ ನಾಯಕರನ್ನು ಆಹ್ವಾನಿಸಿಲ್ಲ ಎಂಬ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಕಾಂಗ್ರೆಸ್ ನಾಯಕರು ಕೂಡ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಜನವರಿ 22ಕ್ಕೆ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣವಾಗಲಿದೆ. ದೇಶದ ಜನ ಆ ಸುಸಂದರ್ಭಕ್ಕಾಗಿ ಕಾಯುತ್ತಿದ್ದಾರೆ. ಅಯೋಧ್ಯೆಗೆ ಹೋಗಲು ಈಗಲೇ ತಯಾರಿಯನ್ನು ನಡೆಸಿದ್ದಾರೆ. ದೇಶಾದ್ಯಂತ ಅಂದು ಬಿಗಿಭದ್ರತೆ ಒದಗಿಸಲಾಗಿದೆ.