ಚಿತ್ರದುರ್ಗ. ಜ.10: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿ ಚುನಾವಣೆ ವೆಚ್ಚ ಗರಿಷ್ಠ ರೂ.95 ಲಕ್ಷಗಳನ್ನು ಮೀರುವಂತಿಲ್ಲ ಎಂದು ಜಿಲ್ಲಾ ಚುನಾವಣಾ ವೆಚ್ಚ ಉಸ್ತುವಾರಿ ಕೋಶದ ನೋಡಲ್ ಅಧಿಕಾರಿ ಹಾಗೂ ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಡಿ.ಆರ್.ಮಧು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ಪ್ರಯುಕ್ತ ಜಿಲ್ಲಾ ಚುನಾವಣಾ ವೆಚ್ಚ ಉಸ್ತುವಾರಿ ಕೋಶದ ವತಿಯಿಂದ ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಸಹಾಯಕ ವೆಚ್ಚ ಅಧಿಕಾರಿಗಳು ಹಾಗೂ ತಂಡದವರಿಗೆ ಲೋಕಸಭಾ ಚುನಾವಣಾ ಖರ್ಚು ವೆಚ್ಚ ತರಬೇತಿಯಲ್ಲಿ ಅವರು ಮಾತನಾಡಿದರು.
ಚುನಾವಣಾ ನಾಮಪತ್ರ ಸಲ್ಲಿಸಿದ ದಿನಾಂಕದಿಂದ ಮತದಾನ ಎಣಿಕೆ ಮುಗಿಯುವ ತನಕ ಆದಂತಹ ಎಲ್ಲಾ ವೆಚ್ಚಗಳನ್ನು ಸಲ್ಲಿಸುವುದು ಅಭ್ಯರ್ಥಿಗಳು ಕರ್ತವ್ಯವಾಗಿದೆ. ಪ್ರತಿ ಅಭ್ಯರ್ಥಿಯ ಚುನಾವಣೆ ವೆಚ್ಚವನ್ನು ಗರಿಷ್ಠ ರೂ.95 ಲಕ್ಷಗಳಿಗೆ ಮಿತಿಗೊಳಿಸಲಾಗಿದೆ. ಅಭ್ಯರ್ಥಿಯು ಈ ಹಣದ ಖರ್ಚು ವೆಚ್ಚಗಳ ನಿರ್ವಹಣೆಗಾಗಿ ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ತೆರೆಬೇಕು. ಚುನಾವಣೆ ವೆಚ್ಚಗಳನ್ನು ಬ್ಯಾಂಕ್ ಮೂಲಕವೇ ಪಾವತಿಸಬೇಕು. ಅಭ್ಯರ್ಥಿಗಳು ಕೈಗೊಳ್ಳುವ ಚುನಾವಣೆ ಪ್ರಚಾರ, ಬಳಸುವ ವಾಹನ, ಬಿತ್ತಿ ಪತ್ರಗಳು, ಸಭೆ, ಸಮಾರಂಭ, ಸ್ಟಾರ್ ಪ್ರಚಾರಕರು. ಸಭೆಯ ವೇದಿಕೆ, ಊಟ ಉಪಹಾರದ ಸೇರಿದಂತೆ ಇತರೆ ಎಲ್ಲಾ ವೆಚ್ಚಗಳನ್ನು ಚಿತ್ರಿಕರಿಸಿ ಕಳಿಸಿರುವ ಮಾಹಿತಿ ಆಧಾರದ ಮೇಲೆ ದಾಖಲಿಸಬೇಕು. ಅಭ್ಯರ್ಥಿಗಳು ಚುನಾವಣೆ ವೆಚ್ಚದ ಮಾಹಿತಿಯನ್ನು ಕಾಲಕಾಲಕ್ಕೆ ಚುನಾವಣೆ ವೆಚ್ಚ ಕೋಶಕ್ಕೆ ಸಲ್ಲಿಸಬೇಕು ಎಂದು ಅವರು ತಿಳಿಸಿದರು.
ಸಭೆ ಅಧ್ಯಕ್ಷತೆ ವಹಿಸಿ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಸಹಾಯಕ ವೆಚ್ಚ ಅಧಿಕಾರಿಗಳು ಅಭ್ಯರ್ಥಿಗಳ ಚುನಾವಣೆ ವೆಚ್ಚವನ್ನು ಕರಾರುವಕ್ಕಾಗಿ ದಾಖಲಿಸಬೇಕು. ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಮುಕ್ತ ನ್ಯಾಯಸಮ್ಮತ, ಶಾಂತಿಯುತ ಹಾಗೂ ಯಶಸ್ವಿಯಾಗಿ ನಡೆಸಲು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುವಂತೆ ತಿಳಿಸಿದರು.
ಸಭೆಯಲ್ಲಿ ತರಬೇತಿ ನಿರ್ವಹಣಾ ಕೋಶದ ನೋಡಲ್ ಅಧಿಕಾರಿ ಜಗದೀಶ್ ಹೆಬ್ಬಳ್ಳಿ, ಚುನಾವಣೆ ಶಿರಸ್ತೇದಾರ ಮಲ್ಲಿಕಾರ್ಜುನ್ ಸೇರಿದಂತೆ ಎಲ್ಲಾ ವಿಧಾನಸಭಾ ಕ್ಷೇತ್ರದ ಸಹಾಯಕ ವೆಚ್ಚ ಅಧಿಕಾರಿಗಳು ಹಾಗೂ ತಂಡಗಳ ಸದಸ್ಯರು ಇದ್ದರು.