ವರದಿ : ಕೆ.ಎಂ. ಮುತ್ತುಸ್ವಾಮಿ ಕಣ್ಣನ್
ಸುದ್ದಿಒನ್, ಚಿತ್ರದುರ್ಗ, (ನ.02) : ದಲಿತರ ಬಗ್ಗೆ ಅವಹೇಳನವಾಗಿ ಮಾತನಾಡಿರುವ ರಾಜ್ಯದ ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ವಿರುದ್ದ ಬಿಜೆಪಿ. ಎಸ್ಸಿ ಮೋರ್ಚಾದಿಂದ ಬುಧವಾರ ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಿ ಧಿಕ್ಕಾರಗಳನ್ನು ಕೂಗಲಾಯಿತು.
ಬಿಜೆಪಿ.ಜಿಲ್ಲಾಧ್ಯಕ್ಷ ಎ ಮುರಳಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಸ್ವಾಭಿಮಾನದಿಂದ ಬದುಕುತ್ತಿರುವ ದಲಿತರ ಕುರಿತು ಸಿದ್ದರಾಮಯ್ಯನವರು ಹೀನಾಯವಾಗಿ ಮಾತನಾಡಿರುವುದು ಅವರ ಘನತೆಗೆ ಶೋಭೆಯಲ್ಲ. ದೇಶಕ್ಕೆ ಸಂವಿಧಾನವನ್ನು ಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್‍ರವರನ್ನು ಚುನಾವಣೆಯಲ್ಲಿ ಸೋಲಿಸಿದ್ದು, ಕಾಂಗ್ರೆಸ್. ಇಂದಿಗೂ ದಲಿತರ ಶೋಷಣೆ ಕಾಂಗ್ರೆಸ್‍ನಿಂದ ಆಗುತ್ತಿದೆಯೇ ವಿನಃ ಬಿಜೆಪಿ.ಯಿಂದಲ್ಲ ಎನ್ನುವುದನ್ನು ಮೊದಲು ಸಿದ್ದರಾಮಯ್ಯ ಅರ್ಥಮಾಡಿಕೊಳ್ಳಬೇಕು. ಹೆಚ್ಚು ಶಾಸಕರು, ಸಂಸದರುಗಳಿರುವುದು ಬಿಜೆಪಿ.ಯಲ್ಲಿ ಮಾತ್ರ. ಬೇರೆ ಯಾವ ಪಕ್ಷದಲ್ಲಿಯೂ ಇಲ್ಲ. ಇನ್ನು ಮುಂದಾದರೂ ಸಿದ್ದರಾಮಯ್ಯನವರು ನಾಲಿಗೆಯನ್ನು ಹತೋಟಿಯಲ್ಲಿಟ್ಟುಕೊಂಡು ಸಾರ್ವಜನಿಕವಾಗಿ ದಲಿತರಲ್ಲಿ ಕ್ಷಮೆ ಕೇಳಬೇಕು. ಇಲ್ಲವಾದ್ಲಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.
ಬಿಜೆಪಿ.ಎಸ್ಸಿ.ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಭಾರ್ಗವಿ ದ್ರಾವಿಡ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಸಿಂಧಗಿಯಲ್ಲಿ ನಡೆದ ದಲಿತ ಸಮಾವೇಶದಲ್ಲಿ ಸಿದ್ದರಾಮಯ್ಯನವರು ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿ.ಗೆ ಸೇರಿಕೊಂಡಿದ್ದಾರೆಂದು ಕೀಳಾಗಿ ಮಾತನಾಡಿದ್ದಾರೆ. ಹಾಗಾದರೆ ಜೆಡಿಎಸ್.ತೊರೆದು ಕಾಂಗ್ರೆಸ್ ಬಂದಿರುವ ಸಿದ್ದರಾಮಯ್ಯ ಯಾರು ಎನ್ನುವುದನ್ನು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ. ದಲಿತರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದ್ದು, ಇದೆ ಸಿದ್ದರಾಮಯ್ಯ. ಕಾಂಗ್ರೆಸ್ ದಲಿತರಿಗೆ ಏನು ಯೋಜನೆ ಕೊಟ್ಟಿದೆ. ದಲಿತರನ್ನು ರಾಷ್ಟ್ರಪತಿ ಮಾಡಿದ ಪಕ್ಷ ಬಿಜೆಪಿ. ಕಾಂಗ್ರೆಸ್ ದಲಿತರ ಪರವಿಲ್ಲ. ಸಿದ್ದರಾಮಯ್ಯ ದಲಿತರಲ್ಲಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಬಿಜೆಪಿ.ಜಿಲ್ಲಾ ಎಸ್ಸಿ ಮೋರ್ಚಾ ಉಪಾಧ್ಯಕ್ಷರುಗಳಾದ ನಾಗರಾಜ್, ಪರಶುರಾಂ, ತಿಮ್ಮಣ್ಣ, ಮೊಳಕಾಲ್ಮುರು ಅಧ್ಯಕ್ಷ ಸಿದ್ದಾರ್ಥ, ಶಿವದತ್, ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೈಪಾಲ್, ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ್‍ಯಾದವ್, ಸಂಪತ್, ನಾಗರಾಜ್‍ಬೇದ್ರೆ, ದಗ್ಗೆಶಿವಪ್ರಕಾಶ್, ಹೆಚ್.ಬಿ.ನರೇಂದ್ರ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶೈಲಜಾರೆಡ್ಡಿ, ರೇಖ, ಗ್ರಾಮಾಂತರ ಮಂಡಲ ಅಧ್ಯಕ್ಷ ನಂದಿ ನಾಗರಾಜ್, ಶಾಂತಮ್ಮ, ಕಿರಣ್‍ಕುಮಾರ್, ವಸಂತ, ಬಸವರಾಜ್, ಶಂಭು, ಮಾಜಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್, ಶೀಲಾ, ಮಲ್ಲೇಶಿ ಇನ್ನು ಅನೇಕ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು