ಹೊಸದುರ್ಗ ತಹಶೀಲ್ದಾರ್ ವಿರುದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಪ್ರತಿಭಟನೆ

1 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜನವರಿ.09  : ಜಿಲ್ಲೆಯಲ್ಲಿ ತೀವ್ರ ಬರಗಾಲ ಎದುರಾಗಿದ್ದರೂ ಸರ್ಕಾರ ರೈತರ ನೆರವಿಗೆ ಬರುವಲ್ಲಿ ವಿಫಲವಾಗಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಹಿರಿಯೂರಿನ ವಾಣಿವಿಲಾಸಸಾಗರ ಹಿನ್ನೀರಿನಲ್ಲಿ ಭೂಮಿ ಕಳೆದುಕೊಂಡ ರೈತರು ಸಾಮೂಹಿಕವಾಗಿ ಕೃಷಿ ಮಾಡಲು ಅಲ್ಲಿಯೇ ಗುಡಿಸಲು ನಿರ್ಮಿಸಿಕೊಂಡು ಫ್ಲೆಕ್ಸ್ ಹಾಕಿರುವುದನ್ನು ಹೊಸದುರ್ಗ ಶಾಸಕರ ಕುಮ್ಮಕ್ಕಿನಿಂದ ತಹಶೀಲ್ದಾರ್ ಕಿತ್ತುಹಾಕಿರುವುದರ ವಿರುದ್ದ ಧಿಕ್ಕಾರಗಳನ್ನು ಕೂಗಿದ ಪ್ರತಿಭಟನಾನಿರತ ರೈತರು ತಹಶೀಲ್ದಾರ್ ಹಾಗೂ ಪೊಲೀಸರನ್ನು ಅಮಾನತ್ತುಗೊಳಿಸುವಂತೆ ಒತ್ತಾಯಿಸಿದರು.

ಸ್ಪಿಂಕ್ಲರ್ ಮತ್ತು ತಾಡಪಾಲುಗಳ ಬೆಲೆ ಜಾಸ್ತಿ ಮಾಡಿರುವುದಲ್ಲದೆ ಕಳಪೆ ಗುಣಮಟ್ಟದ ಕೃಷಿ ಪರಿಕರಗಳನ್ನು ಹಿಂದಕ್ಕೆ ಪಡೆದು ಗುಣಮಟ್ಟದ ಪರಿಕರಗಳನ್ನು ಪೂರೈಸಬೇಕು.ನರೇಗಾದ ಬಹುತೇಕ ಕೆಲಸಗಳನ್ನು ಈ ವರ್ಷ ಕೃಷಿ ಮತ್ತು ತೋಟಗಾರಿಕೆಗಳಿಗೆ ತೊಡಗಿಸಬೇಕು. ಬರಗಾಲವಿರುವುದರಿಂದ ರೈತರ ಜಾನುವಾರುಗಳಿಗೆ ಅಗತ್ಯ ಪ್ರಮಾಣದ ಮೇವು ಒದಗಿಸಬೇಕು.
ಜಟ್ಟುಗಟ್ಟಿರುವ ಭದ್ರಾಮೇಲ್ದಂಡೆ ಯೋಜನೆ ಕಾಮಗಾರಿಗಳಿಗೆ ಚುರುಕು ಮುಟ್ಟಿಸಬೇಕೆಂದು ರೈತರು ಆಗ್ರಹಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ, ಜಿಲ್ಲಾಧ್ಯಕ್ಷ ಡಿ.ಎಸ್.ಮಲ್ಲಿಕಾರ್ಜುನ, ಪ್ರಧಾನ ಕಾರ್ಯದರ್ಶಿ ರಾಮರೆಡ್ಡಿ, ನಿಜಲಿಂಗಪ್ಪ, ಬಸವರಾಜ್, ಬೋರೇಶ್, ಸತೀಶ, ಮಂಜುನಾಥ, ಶ್ರೀಕಂಠಮೂರ್ತಿ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *