ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜನವರಿ.05 : ನಿವೃತ್ತಿ ಜೀವನ ಸುಖಮಯವಾಗಿರಬೇಕಾದರೆ ದುಶ್ಚಟದಿಂದ ದೂರವಿದ್ದು, ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕೆಂದು ನಿವೃತ್ತ ನ್ಯಾಯಾಧೀಶರಾದ ಹೆಚ್.ಬಿಲ್ಲಪ್ಪ ನಿವೃತ್ತ ನೌಕರರಿಗೆ ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಜಿಲ್ಲಾ ಶಾಖೆ ವತಿಯಿಂದ ತ.ರಾ.ಸು.ರಂಗಮಂದಿರದಲ್ಲಿ ಶುಕ್ರವಾರ ನಡೆದ ನಿವೃತ್ತ ನೌಕರರ ದಿನಾಚರಣೆ ಹಾಗೂ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಉದ್ಗಾಟಿಸಿ ಮಾತನಾಡಿದರು.
ಹದಿಮೂರು ವರ್ಷಗಳ ಕಾಲ ನಾನು ನ್ಯಾಯಾಧೀಶನಾಗಿದ್ದೆ. ಆಗ ಸಮಾಜದಲ್ಲಿ ಯಾರೊಂದಿಗೂ ಬೆರೆಯುವ ಅವಕಾಶವಿರುತ್ತಿರಲಿಲ್ಲ. ನಿವೃತ್ತಿಯ ನಂತರ ಎಲ್ಲರೊಂದಿಗೆ ಬೆರೆತು ಖುಷಿಯಿಂದ ಇದ್ದೇನೆ. ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವ ಅವಕಾಶ ನಿವೃತ್ತಿಯ ನಂತರ ದೊರಕುತ್ತದೆ ಎಂದರು.
ಸರ್ಕಾರಿ ನೌಕರಿಯಿಂದ ನಿವೃತ್ತಿಯಾದೆ ಎಂದು ಯಾರು ಬೇಜಾರು ಪಟ್ಟುಕೊಳ್ಳಬಾರದು. ಸರ್ಕಾರಿ ನೌಕರಿಯಲ್ಲಿದ್ದಾಗ ಸೀಮಿತವಾದ ಎಲ್ಲೆಯಿರುತ್ತದೆ. ಅದೆ ನಿವೃತ್ತಿಯಾದ ನಂತರ ಆರಾಮಾಗಿ ಎಲ್ಲಾ ಕಡೆ ಸುತ್ತಾಡಿಕೊಂಡು ನೆಮ್ಮದಿಯಾಗಿರಬಹುದು. ನಿವೃತ್ತಿ ಜೀವನ ವೃತ್ತಿ ಜೀವನಕ್ಕಿಂತ ಅತ್ಯಂತ ವಿಶಾಲವಾದುದು. ವಯಸ್ಸು ಸಾಮಾನ್ಯವಾಗಿ ಎಲ್ಲರನ್ನು ಕಾಡುತ್ತದೆ. ಅದಕ್ಕಾಗಿ ಉತ್ತಮ ಹವ್ಯಾಸಗಳನ್ನು ಮೈಗೂಡಿಸಿಕೊಂಡರೆ ಯಾವುದೇ ರೋಗ ರುಜಿನಗಳಿಲ್ಲದೆ ಆರೋಗ್ಯವಾಗಿರಬಹುದು. ಏನನ್ನು ಖರ್ಚು ಮಾಡದೆ ಅಪಾರವಾದ ಸಂತೋಷ ಪಡುವ ಅವಕಾಶಗಳಿವೆ. ಜೀವನ ಎನ್ನುವುದು ಸುಲಭವಲ್ಲ. ಕಷ್ಟ. ಹಾಗಂತ ಎದೆಗುಂದುವುದು ಬೇಡ. ಪುಸ್ತಕಗಳ ಅಧ್ಯಯನದಿಂದ ಜೀವನಕ್ಕೆ ಉಪಯುಕ್ತವಾದ ವಿಚಾರಗಳು ಸಿಗುತ್ತವೆ ಎಂದು ನಿವೃತ್ತ ಸರ್ಕಾರಿ ನೌಕರರಿಗೆ ತಿಳಿಸಿದರು.
ನಿವೃತ್ತಿಯ ನಂತರ ಆಶಾವಾದದಿಂದ ಮುಂದೆ ಸಾಗಿ. ಹಾಸಿಗೆಯಿದ್ದಷ್ಟು ಕಾಲು ಚಾಚಬೇಕು. ಸಾಲ ಮಾಡಿಕೊಂಡು ಕಷ್ಟಪಡಬೇಡಿ. ಹಣಕಾಸಿನ ಹಿಡಿತ ನಿಮ್ಮ ಕೈಯಲ್ಲಿರಲಿ. ಊಟ ತಿಂಡಿಯಿಂದ ವಂಚಿತರಾಗಬೇಡಿ. ನಿಮಗೆ ನೀವು ನಷ್ಟ ಮಾಡಿಕೊಳ್ಳದಂತೆ ಎಚ್ಚರಿಕೆಯಿಂದಿರುವುದು ಒಳ್ಳೆಯದು ಎಂದು ಕಿವಿಮಾತು ಹೇಳಿದರು.
ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ರಂಗಪ್ಪರೆಡ್ಡಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ತ್ಯಾಗ ಮತ್ತು ಸೇವೆಯ ತಳಹದಿಯ ಮೇಲೆ ನಿವೃತ್ತ ನೌಕರರ ಸಂಘವನ್ನು ಕಟ್ಟಲಾಗಿದೆ. ಡಿ.17, 1982 ರಲ್ಲಿ ಸುಪ್ರೀಂಕೋರ್ಟ್ ಮಹತ್ತರ ತೀರ್ಪು ನೀಡಿದ್ದರಿಂದ ಅಂದಿನಿಂದ ನಿವೃತ್ತ ನೌಕರರ ದಿನಾಚರಣೆಯನ್ನು ಪ್ರತಿ ವರ್ಷವೂ ಆಚರಿಸಿಕೊಂಡು ಬರುತ್ತಿದ್ದೇವೆ. ಚಿತ್ರದುರ್ಗದಲ್ಲಿ ಸುಸಜ್ಜಿತವಾದ ನಿವೃತ್ತ ನೌಕರರ ಭವನ ನಿರ್ಮಾಣವಾಗಿದೆ. ಅಲ್ಲಿ ಒಂದೆಡೆ ನಿವೃತ್ತ ನೌಕರರೆಲ್ಲಾ ಸೇರಿ ಸಮಸ್ಯೆಗಳ ಕುರಿತು ಚರ್ಚಿಸುವುದಲ್ಲದೆ ಅನೇಕ ಮನೋರಂಜನಾ ಕಾರ್ಯಕ್ರಮಗಳನ್ನು ಆಚರಿಸಿಕೊಳ್ಳುತ್ತೇವೆಂದು ನುಡಿದರು.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಕಲ್ಯಾಣಾಧಿಕಾರಿ ಶ್ರೀಮತಿ ಎ.ಎಂ.ವೀಣಾ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು.
ನಿವೃತ್ತ ನೌಕರರ ಸಂಘದ ಜಿಲ್ಲಾ ಗೌರವಾಧ್ಯಕ್ಷ ವೈ.ಚಂದ್ರಶೇಖರಯ್ಯ, ಕಾರ್ಯಾಧ್ಯಕ್ಷ ಎಂ.ಶಿವಾನಂದಪ್ಪ, ಸಲಹಾ ಮಂಡಳಿ ಅಧ್ಯಕ್ಷ ಬಿ.ಬಡಮಲ್ಲಪ್ಪ, ಸಾಂಸ್ಕøತಿಕ ಹಾಗೂ ಮನೋರಂಜನಾ ಕೇಂದ್ರದ ಅಧ್ಯಕ್ಷ ಕೆ.ವಾಸುದೇವರೆಡ್ಡಿ, ಬುದ್ದ ನ್ಯಾಷನಲ್ ಫೆಲೋಶಿಪ್ ಪ್ರಶಸ್ತಿ ಪುರಸ್ಕøತ ಪಿ.ನಾಗರಾಜ್, ಶ್ರೀಮತಿ ಹೆಚ್.ಬಿಲ್ಲಪ್ಪ ಹಾಗೂ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.
ಕಿತ್ತೂರುರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕøತೆ ಶ್ರೀಮತಿ ಮೋಕ್ಷರುದ್ರಸ್ವಾಮಿ, ಬಸವೇಶ್ವರ ಪುನರ್‍ಜ್ಯೋತಿ ಐ. ಬ್ಯಾಂಕ್‍ನ ಸ್ಥಾಪನಾ ಅಧ್ಯಕ್ಷೆ ಶ್ರೀಮತಿ ಗಾಯತ್ರಿ ಶಿವರಾಂ ಹಾಗೂ ನಾಲ್ವರು ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.
ಶಿಕ್ಷಕಿ ಶೋಭ ಪ್ರಾರ್ಥಿಸಿದರು. ನಿವೃತ್ತ ಶಿಕ್ಷಕ ಮಂಜುನಾಥ್ ನಿರೂಪಿಸಿದರು.