ಹಾಸನ: ಅಕ್ರಮವಾಗಿ ಮರಗಳ ಮಾರಣಹೋಮ ಮಾಡಿದ ಆರೋಪದ ಮೇಲೆ ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹ ಅವರನ್ನು ಬಂಧಿಸಲಾಗಿತ್ತು. ಇದೀಗ ಆ ಪ್ರಕರಣ ಸಂಬಂಧ ವಿಕ್ರಂ ಸಿಂಹ ಅವರಿಗೆ ಜಾಮೀನು ಸಿಕ್ಕಿದೆ. ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಬೇಲ್ ಮೇಲೆ ಹೊರಗೆ ಬಂದ ಮೇಲೆ ಪ್ರತಿಕ್ರಿಯೆ ನೀಡಿದ ವಿಕ್ರಂ ಸಿಂಹ, ನಾನು ಕೃಷಿ ಮಾಡುವುದಕ್ಕೆ ಅಲ್ಲಿಗೆ ಹೋದವನು. ಇದೆಲ್ಲಾ ರಾಜಕೀಯ ಪಿತೂರಿ. ಆದರೆ ನಿಮ್ಮೆಲ್ಲರ ಸಹಕಾರದಿಂದ ಸತ್ಯಕ್ಕೆ ಜಯ ಸಿಕ್ಕಿದೆ ಎಂದಿದ್ದಾರೆ.
ಮರಗಳ ಮಾರಣಹ ನಡೆಸಿದ ಆರೋಪದ ಮೇಲೆ ವಿಕ್ರಂ ಸಿಂಹ ಅವರನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದಿದ್ದರು. ಬಳಿಕ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಪೊಲೀಸರು ವಿಚಾರಣೆ ನಡೆಸಬೇಕೆಂದುಕೊಂಡಾಗ ವಿಕ್ರಂ ಸಿಂಹ ಅವರ ಅನಾರೋಗ್ಯ ಕಾಡಿತ್ತು. ಹೈ ಬಿಪಿಯಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಯ ಬಳಿಕ ಮತ್ತೆ ವಿಚಾರಣೆಗೆ ಒಳಪಡಿಸಲಾಗಿತ್ತು. ಇಂದು ನ್ಯಾಯಾಲಯಕ್ಕೂ ಹಾಜರುಪಡಿಸಲಾಗಿತ್ತು. ವಿಚಾರಣೆಯ ಬಳಿಕ ವಿಕ್ರಂ ಸಿಂಹ ಅವರಿಗೆ ಜಾಮೀನು ಮಂಜುರಾಗಿದೆ.
ವಿಕ್ರಂ ಸಿಂಹ ಬಂಧನದ ಬಳಿಕ, ಸಂಸದ ಪ್ರತಾಪ್ ಸಿಂಹ ಅವರು ಸಿಎಂ ಸಿದ್ದರಾಮಯ್ಯ ಅವರ ಮೇಲೆ ಆಕ್ರೋಶ ಹೊರ ಹಾಕಿದ್ದರು. ಇದಕ್ಕೆ ರಾಜಕೀಯ ಬೆರೆಸಿ ಮಾತಮಾಡಿದ್ದರು. ತಮ್ಮ ಮಗನ ರಾಜಕೀಯ ಭವಿಷ್ಯಕ್ಕಾಗಿ ಈ ರೀತಿ ನಡೆದುಕೊಂಡಿದ್ದಾರೆಂದು ಕಿಡಿಕಾರಿದ್ದರು. ಬ್ರಿಲಿಯಂಟ್ ಪೊಲಿಟಿಷಿಯನ್, ಹ್ಯಾಟ್ಸಾಫ್ ಎಂದೆಲ್ಲ ಹೇಳಿ, ಆಕ್ರೋಶ ಹೊರ ಹಾಕಿದ್ದರು. ಇದೀಗ ನ್ಯಾಯಾಲಯ ವಿಕ್ರಂ ಸಿಂಹ ಅವರಿಗೆ ಜಾಮೀನು ಮಂಜೂರು ಮಾಡಿದೆ.