ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.29 : ನಗರದ ಜೈಲ್ ರಸ್ತೆಯ ಪಾಳು ಬಿದ್ದ ಮನೆಯೊಂದರಲ್ಲಿ ಐದು ಜನರ ಅಸ್ಥಿಪಂಜರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ಚುರುಕುಗೊಂಡಿದೆ. ಇಂದು ಬೆಳಿಗ್ಗೆ ವಿಧಿ ವಿಜ್ಞಾನ ತಂತ್ರಜ್ಞರು ಭೇಟಿ ನೀಡಿ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಈಗಾಗಲೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದರ ನಡುವೆ ಕೇಸ್ ಗೊಂದು ಟ್ವಿಸ್ಟ್ ಸಿಕ್ಕಿದೆ. ಅಸ್ಥಿಪಂಜರ ಪತ್ತೆಯಾದವರ ಮನೆಯಲ್ಲಿ ಡೆತ್ ನೋಟ್ ಸಿಕ್ಕಿದೆ. ಆ ಡೆತ್ ನೋಟ್ ನಲ್ಲಿ ಇಬ್ಬರ ಹೆಸರು ಪತ್ತೆಯಾಗಿದೆ.
ಅಸ್ಥಿಪಂಜರ ಪತ್ತೆಯಾದ ಬಳಿಕ ಇದು ಕೊಲೆಯೋ, ಆತ್ಮಹತ್ಯೆಯೋ ಎಂಬ ಅನುಮಾನಗಳು ಶುರುವಾಗಿದ್ದವು. ಇದೀಗ ಪತ್ತೆಯಾಗಿರುವ ಡೆತ್ ನೋಟ್ ನಲ್ಲಿ ಆತ್ಮಹತ್ಯೆ ಎಂಬಂತೆ ಉಲ್ಲೇಖವಾಗಿದೆ. ಆತ್ಮಹತ್ಯೆಗೆ ಕಾರಣವೇನು ಎಂಬುದನ್ನು ಉಲ್ಲೇಖ ಮಾಡಲಾಗಿದೆ. ಇಬ್ಬರು ವ್ಯಕ್ತಿಗಳು ನೀಡುತ್ತಿರುವ ಚಿತ್ರಹಿಂಸೆಯಿಂದಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದೇವೆ ಎಂದು ಎಂದು ಡೆತ್ ನೋಟ್ ನಲ್ಲಿ ಬರೆಯಲಾಗಿದೆ.
ಚಿತ್ರದುರ್ಗದ ಓರ್ವ ವ್ಯಕ್ತಿ ಹಾಗೂ ದೊಡ್ಡ ಸಿದ್ದವ್ವನಹಳ್ಳಿ ಗ್ರಾಮದ ಓರ್ವ ವ್ಯಕ್ತಿ ಎಂಬ ಶಂಕೆ ವ್ಯಕ್ತವಾಗಿದ್ದು, ಹೆಸರು ಮಾತ್ರ ಬಹಿರಂಗವಾಗಿಲ್ಲ. ಜಮೀನು ಪ್ರಕರಣದ ವಿಚಾರಣೆ ವೇಳೆ ಇಬ್ಬರು ವ್ಯಕ್ತಿಗಳು ನಮಗೆ ಹಿಂಸೆ ನೀಡುತ್ತಿದ್ದಾರೆ. ಅವರಿಂದಲೇ ಆತ್ಮಹತ್ಯೆಗೆ ಶರಣಾಗುತ್ತಿದ್ದೇವೆ ಎಂದು ಡೆತ್ ನೋಟ್ ನಲ್ಲಿ ಹೇಳಿಕೊಂಡಿದ್ದಾರೆ. ಈ ವ್ಯಕ್ತಿಗಳ ಹೆಸರನ್ನು ಪೊಲೀಸರು ಬಹಿರಂಗಗೊಳಿಸಿಲ್ಲ. ಅಲ್ಲದೇ ಡೆತ್‌ನೋಟ್‌ನಲ್ಲಿಯೂ ಸಾಕಷ್ಟು ಅನುಮಾನಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಇಬ್ಬರ ವ್ಯಕ್ತಿಗಳ ಹುಡುಕಾಟಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ನಿವೃತ್ತ ಎಂಜಿನಿಯರ್ ಜಗನ್ನಾಥ ರೆಡ್ಡಿ (70), ಪತ್ನಿ ಪ್ರೇಮಾವತಿ (60), ಮಗಳು ತ್ರಿವೇಣಿ (42), ಮಗ ಪುತ್ರರಾದ ಕೃಷ್ಣಾ ರೆಡ್ಡಿ (40) ಹಾಗೂ ನರೇಂದ್ರ ರೆಡ್ಡಿ (38) ಎಂಬುವವರು ವಾಸವಾಗಿದ್ದರು ಎಂದು ತಿಳಿದು ಬಂದಿದೆ. ಜಗನ್ನಾಥ ರೆಡ್ಡಿ ಅವರಿಗೆ ಮೂವರು ಗಂಡು ಮಕ್ಕಳು, ಒರ್ವ ಪುತ್ರಿ ಇದ್ದರು. ಯಾರಿಗೂ ಮದುವೆ ಆಗಿರಲಿಲ್ಲ ಎನ್ನಲಾಗಿದ್ದು , ಇನ್ನೊಬ್ಬ ಹಿರಿಯ ಮಗ ಮಂಜುನಾಥ ರೆಡ್ಡಿ ಎಂಬುವವರು ಈ ಹಿಂದೆಯೇ ಮೃತಪಟ್ಟಿದ್ದರು ಎನ್ನುತ್ತಾರೆ ಸಂಬಂಧಿಕರು.