ಬೆಂಗಳೂರು: ಕಳೆದ ಕೆಲ ದಿನಗಳಿಂದಾನೂ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ರಾಜಕೀಯ ನಿವೃತ್ತಿ ಘೋಷಿಸಿರುವ ಬಗ್ಗೆಯೇ ಮಾತನಾಡುತ್ತಿದ್ದರು. ಟಿಕೆಟ್ ಆಕಾಂಕ್ಷಿಯಲ್ಲ, ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದೇ ಹೇಳಿದ್ದರು. ಆದರೆ ಈಗ ಆ ಹೇಳಿಕೆಗೆ ಉಲ್ಟಾ ಹೇಳಿಕೆ ನೀಡಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಡಿ ವಿ ಸದಾನಂದ ಗೌಡ ಅವರು, ಉತ್ತರ ಕ್ಷೇತ್ರದಿಂದ ಮತ್ತೆ ಸ್ಪರ್ಧೆಗೆ ಒತ್ತಡ ಹೆಚ್ಚಾಗಿದೆ. ನಿನ್ನೆ ನಮ್ಮ ಹಿರಿಯ ನಾಯಕರು ಮನೆಗೆ ಬಂದು ಸ್ಪರ್ಧೆ ಮಾಡುವಂತೆ ಮನವಿ ಮಾಡಿದರು. ಎಲ್ಲಾ ಶಾಸಕರು, ಮಾಜಿ ಮಂತ್ರಿಗಳು, ಕಾರ್ಯಕರ್ತರು ಕೂಡ ಹೇಳುತ್ತಿದ್ದಾರೆ. ಎಸ್ ಟಿ ಸೋಮಶೇಖರ್, ಮುನಿರಾಜು, ಭೈರತಿ ಬಸವರಾಜು ಕೂಡ ಈ ಬಾರಿ ಸ್ಪರ್ಧೆ ಮಾಡುವಂತೆ ಹೇಳಿದ್ದಾರೆ ಎಂದಿದ್ದಾರೆ.
ಅವರೆಲ್ಲರೂ ನನ್ನ ಮೇಲೆ ಪ್ರೀತಿ ಇಟ್ಟುಕೊಂಡಿದ್ದಾರೆ. ಬೆಂಗಳೂರು ಉತ್ತರದಲ್ಲಿ ಎಂಟು ಕ್ಷೇತ್ರದಲ್ಲೂ ನನ್ನ ಶತ್ರುಗಳಿಲ್ಲ. ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎಂಬುದೇ ನನ್ನ ಆಸೆ. ಆದರೆ ನೀವೇ ಸ್ಪರ್ಧೆ ಮಾಡಿ ಎಂದು ಹಿಂಸೆ ಮಾಡುತ್ತಿದ್ದಾರೆ. ಮತ್ತೆ ಸ್ಪರ್ಧೆ ಮಾಡುವ ಬಗ್ಗೆ ಮನಸ್ಸು ಬದಲಿಸಿಕೊಳ್ಳುವ ಬಗ್ಗೆ ಯೋಚನೆ ಮಾಡೋಣಾ ಎಂದೇ ಹೇಳಿದ್ದಾರೆ. ಈ ಮೂಲಕ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸದಾನಂದ ಗೌಡ ಅವರು ಸ್ಪರ್ಧೆ ಮಾಡುವ ಸೂಚನೆಯನ್ನು ನೀಡಿದ್ದಾರೆ.