ಬೆಂಗಳೂರು: ಪುನೀತ್ ರಾಜ್‍ಕುಮಾರ್ ಅಂತಿಮ ದರ್ಶನದ ಭಾಗ್ಯ ಅದೆಷ್ಟೋ ಜನ ಅಭಿಮಾನಿಗಳಿಗೆ ಧಕ್ಕಲಿಲ್ಲ. ಅವರ ಸಮಾಧಿಯನ್ನಾದರೂ ನೋಡಬೇಕೆಂಬ ಆತುರ ಸಾಕಷ್ಟು ಅಭಿಮಾನಿಗಳದ್ದು. ಹೀಗಾಗಿ ಅಂತ್ಯಸಂಸ್ಕಾರದ ಬಳಿಕವೂ ಕಂಠೀರವ ಸ್ಟುಡಿಯೋಗೆ ಬಂದು ಅದೆಷ್ಟೊ ಜನ ವಾಪಾಸ್ಸಾಗಿದ್ರು.
ಪುನೀತ್ ಗೆ ಕುಟುಂಬಸ್ಥರಿಂದ ಹಾಲು ತುಪ್ಪ ಕಾರ್ಯಕ್ರಮ ಮುಗಿಯುವವರೆಗೂ ಸಾರ್ವಜನಿಕರಿಗೆ ಅಪ್ಪು ಸಮಾಧಿ ನೋಡಲು ಅನುಮತಿ ಇರಲಿಲ್ಲ. ಹೀಗಾಗಿ ನಿರಾಸೆಯಲ್ಲೇ ವಾಪಾಸ್ ಆಗಿದ್ರು. ಇಂದು ಕುಟುಂಬಸ್ಥರಿಂದ ಹಾಲು ತುಪ್ಪ ಬಿಡೋ ಕಾರ್ಯ ನೆರವೇರಿದೆ. ಇಂದಿನಿಂದ ಸಾರ್ವಜನಿಕರ ದರ್ಶನಕ್ಕೂ ಅನುಮತಿ ನೀಡಲಾಗಿದೆ.
ಹಾಲು ತುಪ್ಪ ಬಿಟ್ಟ ಬಳಿಕ ರಾಘವೇಂದ್ರ ರಾಜ್‍ಕುಮಾರ್ ಮಾತನಾಡಿದ್ದು, ಇವತ್ತು ಐದನೇ ದಿನದ ಹಾಲು ತುಪ್ಪ ಕಾರ್ಯ ಮುಗಿಸಿದ್ದೇವೆ. 11 ನೇ ದಿನದ ಕಾರ್ಯದ ಬಗ್ಗೆ ಹೇಳುತ್ತೇವೆ. ಈ ನೋವಿನೊಂದಿಗೆ ಸದಾ ಬದುಕುತ್ತೇವೆ. ಬೇರೆ ದಾರಿಯೂ ಇಲ್ಲ ಆಯ್ಕೆಗಳು ಇಲ್ಲ ಎಂದು ದುಃಖದಲ್ಲೇ ನುಡಿದಿದ್ದಾರೆ.
ದೇವರು ಅಪ್ಪಾಜಿಗೆ 76 ವರ್ಷ ಕೊಟ್ಟ ಅಪ್ಪುಗೆ 46 ಕೊಟ್ಟ. ಆದರೆ ಅಪ್ಪಾಜಿ ಅಷ್ಟು ವರ್ಷದಲ್ಲಿ ಗಳಿಸಿದ್ದ ಹೆಸರನ್ನ ಅಪ್ಪು 45 ವರ್ಷದಲ್ಲೇ ಗಳಿಸಿದ್ದಾನೆ. ಅಷ್ಟು ಅವಾರ್ಡ್ ಗಳು ಬಂದ್ವು. ಎಷ್ಟು ಜನ ಅಭಿಮಾನಿಗಳನ್ನ ಗಳಿಸಿದ್ದು. ಅವನಿಲ್ಲ ಅನ್ನೋ ನೋವನ್ನ ನಿಮ್ಮ ಮುಂದೆ ನಾವ್ ಯಾವತ್ತು ತೋರಿಸಲ್ಲ ಎಂದಿದ್ದಾರೆ.