ಮೈಸೂರು: ಸಂಸತ್ ಮೇಲೆ ಕಲರ್ ದಾಳಿ ನಡೆಸಿದ ಮೇಲೆ ಸಂಸದ ಪ್ರತಾಪ್ ಸಿಂಹ ಮೇಲೆ ಕಾಂಗ್ರೆಸ್ ನಾಯಕರು ಗರಂ ಆಗಿದ್ದಾರೆ. ಕೆಲ ಪ್ರಶ್ನೆಗಳಿಗೆ ಉತ್ತರ ತಿಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಇದೀಗ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ಘಟನೆ ಸಂಬಂಧ ಪ್ರಶ್ನೆ ಕೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಎಂ ಲಕ್ಷ್ಮಣ್, ಮನೋರಂಜನ್ ಗೂ ಪ್ರತಾಪ್ ಸಿಂಹಗೂ ಏನು ಸಂಬಂಧ..? ಒಟ್ಟು ಪ್ರಕರಣದಲ್ಲಿ ಅವರ ಪಾತ್ರವೇನು..? ಲೋಕಸಭೆಯ ಭದ್ರತಾ ವಿಚಾರವಾಗಿ ಕೇಳಿದರೆ ಪ್ರತಾಪ್ ಸಿಂಹ ಅವರು ತಾಯಿ ಚಾಮುಂಡೇಶ್ವರಿ ಎಲ್ಲಾ ನೋಡಿಕೊಳ್ಳುತ್ತಾಳೆ. ನಾನು ದೇಶಭಕ್ತನೋ ಅಲ್ಲವೋ ಎಂಬುದನ್ನು ಜನ ಚುನಾವಣೆಯಲ್ಲಿ ನಿರ್ಧರಿಸುತ್ತಾರೆ ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಗರಂ ಆಗಿದ್ದಾರೆ.
ಪ್ರತಾಪ್ ಸಿಂಹ ಅವರಿಗೆ ತಾಯಿ ಚಾಮುಂಡೇಶ್ವರಿ ಮೇಲೆ ಭಕ್ತಿ ಇದ್ದರೆ, ಕೇಂದ್ರದ ವೀಕ್ಷಕರು ಮಾಡಿದ ವರದಿಯಲ್ಲಿ ಏನಿದೆ..? ಮನೋರಂಜನ್ ಗೂ ನಿಮಗೂ ಸಂಪರ್ಕ ಇಲ್ಲವೇ..? ಪ್ರಕರಣದಲ್ಲಿ ನಿಮ್ಮ ಪಾತ್ರ ಇಲ್ಲವೇ ಎಂಬುದನ್ನು ಬಹಿರಂಗ ಪಡಿಸಿ ಎಂದು ಸವಾಲು ಹಾಕಿದ್ದಾರೆ.
ಸಂಸತ್ ಮೇಲೆ ಕಲರ್ ಬಾಂಬ್ ದಾಳಿ ನಡೆಸಿದ ಮನೋರಂಜನ್, ಒಳಗೆ ಪ್ರವೇಶ ಮಾಡುವುದಕ್ಕೆ ಸಂಸದ ಪ್ರತಾಪ್ ಸಿಂಹ ಅವರಿಂದ ಪಡೆದ ಪಾಸ್ ಅನ್ನೇ ಬಳಕೆ ಮಾಡಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ನಾಯಕರು ಪ್ರತಾಪ್ ಸಿಂಹ ವಿರುದ್ಧ ತಿರುಗಿ ಬಿದ್ದಿದ್ದು, ಇದಕ್ಕೆ ಉತ್ತರ ನೀಡಿ ಎನ್ನುತ್ತಿದ್ದಾರೆ. ಇಂದು ಸುದ್ದಿಗೋಷ್ಟಿ ನಡೆಸಿದ ಎಂ ಲಕ್ಷ್ಮಣ್ ಅವರು ಕೂಡ ಪ್ರಶ್ನೆಗೆ ಉತ್ತರ ಕೇಳಿದ್ದಾರೆ.