ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 25 : ನಗರದ ಒನಕೆ ಓಬವ್ವ ವೃತ್ತದಲ್ಲಿ ಬಸವ ಪುತ್ಥಳಿ ನಿರ್ಮಾಣಕ್ಕೆ ನಗರಸಭೆ ಮಾಜಿ ಅಧ್ಯಕ್ಷ, ಛಲವಾದಿ ಸಮಾಜದ ಮುಖಂಡ ನಿರಂಜನ ಮೂರ್ತಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ವೀರ ವನಿತೆ ಒನಕೆ ಓಬವ್ವ ವೃತ್ತದಲ್ಲಿ ರಾತ್ರೋ ರಾತ್ರಿ ಕೆಲವರು ಬಸವ ಪುತ್ಥಳಿ ನಿರ್ಮಾಣ ಮಾಡಲು ಪ್ರಯತ್ನಿಸಿದ್ದು ಖಂಡನೀಯ, ಇದನ್ನು ನಾವು ವಿರೋದಿಸುತ್ತಿದ್ದು ರಾತ್ರೋ ರಾತ್ರಿ ಪುತ್ತಳಿ ಇಡಲು ಬಂದವರನ್ನ ಪೊಲೀಸರು ತಡೆದಿದ್ದಾರೆ.
ಈಗಾಗಲೇ ಇರುವ ವೃತ್ತಕ್ಕೆ ಮತ್ತೊಂದು ಹೆಸರು ಇಡುವುದು ಸೂಕ್ತವಲ್ಲ. ಇಲ್ಲಿ ಬಸವ ಪುತ್ಥಳಿ ನಿರ್ಮಾಣ ಮಾಡಿದರೆ ಕೆಲ ಸಮುದಾಯಗಳನ್ನು ಎತ್ತಿ ಕಟ್ಟುವ ಕೆಲಸ ಆಗುತ್ತದೆ. ಹಾಗಾಗಿ ಈ ಕೃತ್ಯಕ್ಕೆ ಮುಂದಾದವರ ಮೇಲೆ ಇಲಾಖೆ ಸೂಕ್ರವಾದ ಕ್ರಮಕ್ಕೆ ಮುಂದಾಗಬೇಕು ಹಾಗೂ ಮುಂದಿನ ದಿನಗಳಲ್ಲಿ ಮತ್ತೆ ಪ್ರತಿಮೆ ನಿರ್ಮಾಣಕ್ಕೆ ಮುಂದಾದರೆ ನಾವು ಸುಮ್ಮನಿರುವುದಿಲ್ಲ ಹಾಗೂ ಈ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಗಮನಕ್ಕೂ ಕೂಡ ತಂದಿದ್ದು ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ನಿರಂಜನ್ ಮೂರ್ತಿ ಆಗ್ರಹ ಮಾಡಿದ್ದಾರೆ.
ಬಸವಣ್ಣನವರ ಪ್ರತಿಮೆಯನ್ನು ನಿರ್ಮಾಣ ಮಾಡಲು ನಗರದಲ್ಲಿ ಬೇರೆ ವೃತ್ತ ಇದೆ ಅದರಲ್ಲಿ ಬಸವಣ್ಣರವರ ಪ್ರತಿಮೆಯನ್ನು ನಿರ್ಮಾಣ ಮಾಡಲು ನಾವು ಸಹಾ ಬೆಂಬಲವನ್ನು ನೀಡುತ್ತೇವೆ. ಬಸವಣ್ಣ ನವರು ಎಲ್ಲಾ ಜನಾಂಗದ ಗುರುಗಳಾಗಿದ್ದಾರೆ. ಒಂದು ಕಡೆಯಲ್ಲಿ ಪ್ರತಿಮೆ ಇರುವಾಗ ಅಲ್ಲಿ ಮತ್ತೊಂದು ಪ್ರತಿಮೆಯನ್ನು ನಿರ್ಮಾಣ ಮಾಡುವುದು ಸರಿಯಲ್ಲ. ಇದು ಬೇರೆ ರೀತಿ ಅರ್ಥ ನೀಡುತ್ತದೆ. ಈ ರೀತಿಯ ಕೃತ್ಯ ಮುಂದಿನ ದಿನದಲ್ಲಿ ನಡೆಯದಂತೆ ಜಿಲ್ಲಾಡಳಿತ ಎಚ್ಚರವನ್ನು ವಹಿಸಬೇಕಿದೆ ಎಂದು ಮನವಿ ಮಾಡಿದರು.
ಛಲವಾದಿ ಸಮುದಾಯ ಶ್ರೀ ಬಸವನಾಗಿದೇವ ಶ್ರೀಗಳು ಮಾತನಾಡಿ, ನಾನು ಸಹಾ ಬಸವಣ್ಣನವರ ಅನುಯಾಯಿಯಾಗಿದ್ದೇನೆ ನನಗೆ ಬಸವಣ್ಣರವರ ಮೇಲೆ ಗೌರವವಿದೆ. ಅವರ ಆಚಾರ, ವಿಚಾರವನ್ನು ನಾನು ನನ್ನ ಜೀವನದಲ್ಲಿ ತೊಡಗಿಸಿಕೊಂಡಿದ್ದೇನೆ. ನಾನು ಬಸವಣ್ಣರವರ ದೀಕ್ಷೆಯನ್ನು ಪಡೆದೇ ಬಂದಿದ್ದೇನೆ ಪ್ರತಿ ದಿನ ಲಿಂಗ ಪೂಜೆಯನ್ನು ಮಾಡಿಕೊಳ್ಳುತ್ತೇನೆ. ಅದರೆ ಕಳೆದ ಎರಡು ದಿನಗಳ ಹಿಂದೆ ನಡೆದ ಬಸವಣ್ಣರವರ ಮೂರ್ತಿಯನ್ನು ಸ್ಥಾಪಿಸುವ ಕಾರ್ಯ ನಿಜಕ್ಕೂ ಸಹಾ ಖಂಡನೀಯವಾದದು, ಅಲ್ಲಿ ಈಗಾಗಲೇ ಒಂದು ಮೂರ್ತಿ ಇದೆ ಈಗ ಅಲ್ಲಿಯೇ ಬೇರೆ ಮೂರ್ತಿಯನ್ನು ಸ್ಥಾಪನೆ ಮಾಡುವುದು ಸರಿಯಲ್ಲ ಎಂದರು.
ಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಪ್ರಸನ್ನ ಕುಮಾರ್, ಅಣ್ಣಪ್ಪ, ಗುರುಮೂರ್ತಿ, ಧನಂಜಯ, ರವೀಂದ್ರ, ಜಯರಾಂ ಸೇರಿದಂತೆ ಇತರರು ಭಾಗವಹಿಸಿದ್ದರು.