ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಮುನ್ನುಗ್ಗುತ್ತಿರುವ ಜೆಡಿಎಸ್ ಮತ್ತು ಬಿಜೆಪಿ ನಡುವೆ ಇಂದು ಮಹತ್ವದ ಮಾತುಕತೆ ನಡೆದಿದೆ. ಬಿಜೆಪಿ ಜೊತೆಗೆ ಕೈ ಜೋಡಿಸಿರುವ ಜೆಡಿಎಸ್ ಯಾವೆಲ್ಲಾ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಗಳನ್ನು ಹಾಕಬಹುದು ಎಂಬ ಕುತೂಹಲವಿದೆ. ಆ ಎಲ್ಲಾ ಪ್ರಶ್ಮೆಗಳಿಗೂ ಇಂದು ಮಾಜಿ ಸಿಎಂ ಕುಮಾರಸ್ವಾಮಿ ಉತ್ತರಿಸಿದ್ದಾರೆ.
ಇಂದು ಮಾಜಿ ಪ್ರಧಾನಿ ದೇವೇಗೌಡ್ರು, ರೇವಣ್ಣ, ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಭೇಟಿ ವೇಳೆ ಹಲವು ವಿಚಾರಗಳು ಚರ್ಚೆಯಾಗಿವೆ. ಲೋಕಸಭಾ ಚುನಾವಣೆಯ ವಿಚಾರ ಚರ್ಚೆಗೆ ಬಂದಿದೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
‘ನನ್ನನ್ನು ಸ್ಪರ್ಧೆ ಮಾಡಿ ಎನ್ನುತ್ತಾರೆ. ನನ್ನ ಮೇಲಿನ ಅಭಿಮಾನಕ್ಕೆ ಕೆಲವರು ಸ್ಪರ್ಧೆ ಮಾಡಿ ಎನ್ನುತ್ತಾರೆ. ನಮ್ಮ ಪಕ್ಷ ಹಾಗೂ ಬಿಜೆಪಿಯಲ್ಲೂ ಈ ಅಭಿಪ್ರಾಯ ತಿಳಿಸುತ್ತಿದ್ದಾರೆ. ನಾನು ಮಂತ್ರಿಯಾದರೆ ರಾಜ್ಯಕ್ಕೆ ಆದ್ಯತೆ ಸಿಗಬಹುದು ಎಂಬ ಆಸೆ ಇರಬಹುದು. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ನಾನು ತುದಿಗಾಲಿನಲ್ಲಿ ನಿಂತಿಲ್ಲ. ನನ್ನ ಸ್ಪರ್ಧೆ ಬಗ್ಗೆ ಇನ್ನು ನಿರ್ಧಾರವಾಗಿಲ್ಲ ಎಂದಿರುವ ಕುಮಾರಸ್ವಾಮಿ ಅವರು, ನಿಖಿಲ್ ಸ್ಪರ್ಧೆಯ ಬಗ್ಗೆ ಮತ್ತೆ ಖಚಿತ ಪಡಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಲ್ಲ. ಆದರೆ ಎಲ್ಲಾ ಅಭ್ಯರ್ಥಿಗಳ ಪರವಾಗಿ ಪ್ರಚಾರದಲ್ಲಿ ಇರುತ್ತಾರೆ. ಸೀಟು ಹಂಚಿಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಎರಡು ಪಕ್ಷದ ನಡುವೆ ಒಮ್ಮತ ಮೂಡಬೇಕು. ಅದಕ್ಕೆ ನಾನು ಆದ್ಯತೆ ನೀಡುತ್ತಿದ್ದೇನೆ. ಸೀಟು ಹಂಚಿಕೆಯ ವಿಚಾರ ಆಮೇಲೆ ಎಂದಿದ್ದಾರೆ.