ನವದೆಹಲಿ: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿ ಪ್ರವಾಸದಲ್ಲಿ ಇದ್ದಾರೆ. ರಾಜ್ಯದಲ್ಲಿನ ಬರ ಪರಿಸ್ಥಿತಿ, ಬೆಳೆ ನಾಶ, ರೈತರ ಪರಿಸ್ಥಿತಿಯನ್ನು ಕೇಂದ್ರಕ್ಕೆ ಮನವಿ ಮಾಡುವುದಕ್ಕೆ ಹೊರಟಿದ್ದಾರೆ. ಅದರಂತೆ ನಿನ್ನೆ ಸಿಎಂ ಸಿದ್ದರಾಮಯ್ಯ, ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದಾರೆ. ಭೇಟಿ ವೇಳೆ ರಾಜ್ಯದ ಬರಗಾಲದ ಚರ್ಚೆಯಾಗಿದ್ದು, ಪರಿಹಾರಕ್ಕೆ ಮನವಿ ಮಾಡಿದ್ದಾರೆ.
ಇಂದು ದೆಹಲಿಯಲ್ಲಿಯೇ ಇರುವ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ರಾಜ್ಯದ ಬರಪರಿಹಾರಕ್ಕೆ ಹಣ ಬಿಡುಗಡೆ ಮಾಡುವುದಕ್ಕೆ ಮನವಿ ಮಾಡಲಿದ್ದಾರೆ. ಈಗಾಗಲೇ 18,177.44 ಕೋಟಿಯಲ್ಲಿ 4663.12 ಕೋಟಿ ಇನ್ಪುಟ್ ಸಬ್ಸಿಡಿ, 12,577.86 ಕೋಟಿ ತುರ್ತು ಪರಿಹಾರ ನಿಧಿ, 566.78 ಕೋಟಿ ಕುಡಿಯುವ ನೀರು, 363.68 ಕೋಟಿ ದನಗಳಿಗೆ ಆಹಾರ ಪೂರೈಕೆ ಮಾಡುವ ವಿಚಾರವಾಗಿ ಪ್ರಧಾನಿ ಮೋದಿ ಜೊತೆ ಸಿಎಂ ಸಿದ್ದರಾಮಯ್ಯ ಚರ್ಚಿಸಿದ್ದಾರೆ.
ರಾಜ್ಯದಲ್ಲಿ ಮಳೆಯ ಸಮಯ ಮುಗಿದಿದೆ. ಮುಂಗಾರು ಇಲ್ಲ, ಹಿಂಗಾರು ಇಲ್ಲ. ಹಾಗೋ ಹೀಗೋ ಪ್ರಕೃತಿಯೇ ಸ್ವಲ್ಪ ದಯೆ ತೋರಿ ಬೆಳೆದಿರುವ ರಾಗಿ, ಜೋಳವನ್ನ ಕೊಯ್ಲು ಮಾಡುತ್ತಿದ್ದಾರೆ. ಸಾಲ ಮಾಡಿ ಹಾಕಿದ ಬೆಳೆಯೂ ಅಷ್ಟಾಗಿ ಕೈಗೆ ಬರಲಿಲ್ಲ. ಬೆಳೆ ಮಾರಿ ಹಾಕಿದ ಬಂಡವಾಳವನ್ನು ತೆಗೆದುಕೊಳ್ಳುವುದಕ್ಕೆ ಆಗಲಿಲ್ಲ. ಬರದ ಪ್ರದೇಶವಾಗಿ 233 ತಾಲೂಕುಗಳನ್ನ ಘೋಷಣೆ ಏನೋ ಮಾಡಿದ್ದಾರೆ. ಆದರೆ ರೈತರು ಆ ಬರದ ಪರಿಹಾರಕ್ಕೆ ಕಾದು ಕಾದು ಸುಸ್ತಾಗುತ್ತಿದ್ದಾರೆ.