ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿ.18 : ಕಾಂಗ್ರೆಸ್ ಸಮಾಜದಲ್ಲಿ ತಪ್ಪು ತಿಳುವಳಿಕೆ ಮೂಡಿಸುತ್ತಿದ್ದು, ಕೆಲವರು ಒಳ ಮೀಸಲಾತಿ ಬಗ್ಗೆ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಆರ್.ಎಸ್.ಎಸ್. ಸಾಮಾಜಿಕ ನ್ಯಾಯಕ್ಕೆ ಬದ್ದವಾಗಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿದರು.
ತ.ರಾ.ಸು.ರಂಗಮಂದಿರದಲ್ಲಿ ಸೋಮವಾರ ನಡೆದ ಮಾದಿಗರ ಆತ್ಮಗೌರವ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಅಸ್ಪೃಶ್ಯರು, ತುಳಿತಕ್ಕೊಳಗಾದವರನ್ನು ಮೇಲಕ್ಕೆತ್ತಬೇಕೆಂಬ ಉದ್ದೇಶದಿಂದ ಮೀಸಲಾತಿ ಕೊಡಬೇಕೆಂದು 1950 ರಲ್ಲಿ ಆದೇಶ ಜಾರಿಗೆ ತಂದಾಗ ಪರಿಶಿಷ್ಟ ಜಾತಿಯಲ್ಲಿ ಆರು ಜಾತಿಗಳು ಮಾತ್ರ ಇದ್ದವು. ಕಾಂಗ್ರೆಸ್ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ 101 ಜಾತಿಗಳನ್ನು ಸೇರಿಸಿದ ಪರಿಣಾಮ ಮೀಸಲಾತಿಗಾಗಿ ಕಳೆದ 32 ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಬಲಾಢ್ಯರ ನಡುವೆ ಶೋಷಿತರು ಮೀಸಲಾತಿ ಪಡೆಯುವುದು ಕಷ್ಟ.
ಎಸ್.ಎಂ.ಕೃಷ್ಣ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಸದಾಶಿವ ಆಯೋಗ ರಚಿಸಿ ಅನುದಾನ, ಸಿಬ್ಬಂದಿಯನ್ನು ಕೊಡಲಿಲ್ಲ. ನಾಲ್ಕುವರೆ ವರ್ಷಗಳ ಕಾಲ ರಾಜ್ಯದಲ್ಲಿ ಸುತ್ತಾಡಿ ವರದಿ ನೀಡಲಾಯಿತು. 2013 ರಲ್ಲಿ ಚುನಾವಣೆ ಎದುರಾದಾಗ ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುತ್ತೇವೆಂದು ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಸೇರಿಸಿ ಅಧಿಕಾರಕ್ಕೆ ಬಂದ ಮೇಲೆ ಐದು ವರ್ಷಗಳ ಕಾಲ ತಿರುಗಿ ನೋಡಲಿಲ್ಲ. ಇನ್ನಾದರೂ ಪರಿಶಿಷ್ಟ ಜಾತಿ ಜನಾಂಗ ಎಚ್ಚೆತ್ತುಕೊಳ್ಳಬೇಕೆಂದು ಕರೆ ನೀಡಿದರು.
ಸದಾಶಿವ ಆಯೋಗದ ವರದಿಯನ್ವಯ ಪರಿಶಿಷ್ಟ ಜಾತಿಯಲ್ಲಿನ 101 ಒಳಜಾತಿಗಳಲ್ಲಿ ಯಾರನ್ನು ತೆಗೆದು ಹಾಕುವುದಿಲ್ಲ. ಜನಸಂಖ್ಯೆಗನುಗುಣವಾಗಿ ಆಯಾ ಜಾತಿಗೆ ಸಿಗಬೇಕಾದ ಮೀಸಲಾತಿ ದೊರಕಲಿ. ನಮ್ಮದೇನು ಅಭ್ಯಂತರವಿಲ್ಲ. ಭೋವಿ, ಲಂಬಾಣಿ ಜನಾಂಗದವರಲ್ಲಿ ತಪ್ಪು ತಿಳುವಳಿಕೆ ಮೂಡಿಸಲಾಗುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾಗಿದ್ದರು. ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ದಲಿತರನ್ನು ವಂಚಿಸುತ್ತಲೆ ಬರುತ್ತಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೋಸಗಾರ ದಲಿತರ ಪರವಾಗಿಲ್ಲ.
ಈ ನಿಟ್ಟಿನಲ್ಲಿ ರಾಜ್ಯ ಮಟ್ಟದ ಸಭೆ ಕರೆದು ಸದಾಶಿವ ಆಯೋಗದ ವರದಿ ಒಳ ಮೀಸಲಾತಿ ಜಾರಿಯಿಂದ ಆಗುವ ಲಾಭವನ್ನು ತಿಳಿಸಲಾಗುವುದು. ಇಲ್ಲಿಯವರೆಗೂ ಕಾಂಗ್ರೆಸ್‍ಗೆ ಮತ ನೀಡುತ್ತ ಬರುತ್ತೀದ್ದೀರಿ ದಲಿತರು, ಅಸ್ಪøಶ್ಯರನ್ನು ವಿದ್ಯಾವಂತರನ್ನಾಗಿ ಮಾಡುವಲ್ಲಿ ಕಾಂಗ್ರೆಸ್‍ಗೆ ಇಷ್ಟವಿಲ್ಲ. ಒಳ ಮೀಸಲಾತಿ ಜಾರಿಗೆ ಬಂದರೆ ಪರಿಶಿಷ್ಟ ಜಾತಿಯಲ್ಲಿನ ನೂರ ಒಂದು ಜಾತಿಯ ಯಾರಿಗೂ ಅನ್ಯಾಯವಾಗುವುದಿಲ್ಲ ಎಂದು ತಿಳಿಸಿದರು.
ಉಚಿತವಾಗಿ ಅಕ್ಕಿ, ರಾಗಿ, ಎರಡು ಸಾವಿರ ರೂ. ಆಸೆಯಿಂದ ಕಾಂಗ್ರೆಸ್ ಪಕ್ಷವನ್ನು ನಂಬಿ ಬಲಿಯಾಗಬೇಡಿ. ಎಸ್ಸಿಪಿ. ಟಿಎಸ್ಪಿ. ಹಣವನ್ನು ಐದು ಉಚಿತ ಗ್ಯಾರೆಂಟಿಗಳಿಗೆ ದುರ್ಬಳಕೆ ಮಾಡಿಕೊಂಡಿದ್ದಾರೆ. ಜ.17 ರಂದು ಸುಪ್ರೀಂಕೋರ್ಟ್‍ನಲ್ಲಿ ಏಳು ಸದಸ್ಯರುಳ್ಳ ಬೆಂಚ್‍ಗೆ ಮೀಸಲಾತಿ ಕೇಸ್ ಬರಲಿದೆ.
ಇನ್ನು ಕೆಲವೇ ತಿಂಗಳುಗಳಲ್ಲಿ ನಮ್ಮ ಹೋರಾಟಕ್ಕೆ ಜಯ ಸಿಗಲಿದೆ. ಹೈದರಾಬಾದ್‍ನ ಸಿಕಂದರಾಬಾದ್‍ನಲ್ಲಿ ನಡೆದ ಮಾದಿಗರ ಬೃಹತ್ ಸಮಾವೇಶದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರಮೋದಿ ದಲಿತರ ಪರವಾಗಿರುವುದಾಗಿ ಘೋಷಿಸಿದ್ದಾರೆ. ಕಾಂಗ್ರೆಸ್‍ನಂತೆ ವಂಚನೆ ಮಾಡುವ ಪಕ್ಷ ನಮ್ಮದಲ್ಲ ಎಂದು ಹೇಳಿದರು.
ನಿವೃತ್ತ ಐ.ಎ.ಎಸ್. ಅಧಿಕಾರಿ ಲಕ್ಷ್ಮಿನಾರಾಯಣ ಮಾತನಾಡಿ ಶಿಕ್ಷಣ, ಉದ್ಯೋಗ, ರಾಜಕೀಯ ಅಧಿಕಾರದಿಂದ ನಮ್ಮವರು ವಂಚನೆಗೊಳಗಾಗುತ್ತಲೆ ಬರುತ್ತಿರುವುದಕ್ಕಾಗಿ ಅನೇಕ ವರ್ಷಗಳಿಂದಲೂ ಒಳ ಮೀಸಲಾತಿಗಾಗಿ ಹೋರಾಟ ನಡೆಯುತ್ತಿದೆ. ಸದಾಶಿವ ಆಯೋಗದ ವರದಿ ಜಾರಿಗಾಗಿ ಕೂಡಲ ಸಂಗಮದಿಂದ ಚಿತ್ರದುರ್ಗಕ್ಕೆ ಪಾದಯಾತ್ರೆ ಬಂದಿತು. ದಲಿತರು, ಅಸೃಶ್ಯರು ಒಳ ಮೀಸಲಾತಿ ಬಗ್ಗೆ ಕೆಲವರು ತಪ್ಪು ತಿಳುವಳಿಕೆ ಮೂಡಿಸುತ್ತಿರುವುದರ ವಿರುದ್ದ ಎಚ್ಚರದಿಂದಿರಿ ಎಂದು ಮನವಿ ಮಾಡಿದರು.
ಗುರುನಾಥ್ ದ್ಯಾಮವ್ವನವರ್ ಒಳ ಮೀಸಲಾತಿ ಕುರಿತು ಮಾತನಾಡಿದರು.
ಕೇಂದ್ರ ಮಂತ್ರಿ ಎ.ನಾರಾಯಣಸ್ವಾಮಿರವರ ಆಪ್ತ ಸಹಾಯಕ ಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಾಬು ದೊಡ್ಮನಿ, ಬಿ.ಆರ್.ಮುನಿರಾಜು, ಹುಲ್ಲೂರು ಕುಮಾರ್, ಡಿ.ಎಸ್.ಎಸ್.ಮುಖಂಡ ಮಹಾಂತೇಶ್, ಮಾದಿಗ ದಂಡೋರ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ನಿವೃತ್ತ ಕೆ.ಎ.ಎಸ್.ಅಧಿಕಾರಿ ಪರಶುರಾಮ್, ರಾಜಣ್ಣ, ಡಿ.ಓ. ಮುರಾರ್ಜಿ ವೇದಿಕೆಯಲ್ಲಿದ್ದರು.