ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.17 : ನವಯಾನ ಬುದ್ದ ಧಮ್ಮದಂತೆ ಎಲ್ಲರೂ ನಡೆದರೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಅಸಮಾನತೆ ನಿವಾರಣೆಯಾಗಲಿದೆ ಎಂದು ಸಾಮಾಜಿಕ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಪ್ರೊ.ಸಿ.ಕೆ.ಮಹೇಶ್ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಕಿಸಾನ್ ಮೋರ್ಚ ಅಧ್ಯಕ್ಷ, ಮಡಿವಾಳ ಸಮಾಜದ ಶಿವಲಿಂಗಪ್ಪನವರ ವಿದ್ಯಾನಗರದಲ್ಲಿರುವ ನಿವಾಸದಲ್ಲಿ ಭಾನುವಾರ ನಡೆದ ನವಯಾನ ಬುದ್ದ ಧಮ್ಮ ಸಂಘ, ಡಾ.ಬಿ.ಆರ್.ಅಂಬೇಡ್ಕರ್ ನವಯಾನ ನೂರನೆ ಸರಣಿ ಕಾರ್ಯಕ್ರಮದಲ್ಲಿ ಬುದ್ದನ ವಿಗ್ರಹಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ನವಯಾನ ಬುದ್ದ ಧಮ್ಮ, ಸಂವಿಧಾನದಲ್ಲಿ ಏಕತೆಯಿದೆ. ಅದಕ್ಕಾಗಿಯೇ ಡಾ.ಬಿ.ಆರ್.ಅಂಬೇಡ್ಕರ್ ಹಿಂದೂ ಧರ್ಮವನ್ನು ತೊರೆದು ಭೌದ್ದ ಧರ್ಮಕ್ಕೆ ಸೇರ್ಪಡೆಗೊಂಡರು.
ಮಡಿವಾಳ ಮಾಚಿ ದೇವರು ಇದ್ದಿದ್ದರಿಂದಲೆ ವಚನ ಚಳುವಳಿ ಉಳಿದಿದೆ. ಬುದ್ದನ ತಾತ್ವಿಕ ನಿಲುವನ್ನು ವಚನಕಾರರು ಮಾತಿನ ಕ್ರಿಯೆಯಲ್ಲಿ ಪಾಲಿಸಿದ್ದಾರೆ. ಹಿಂದುಳಿದ ವರ್ಗದವರು, ಶೋಷಿತರು, ದಲಿತರು ತಮ್ಮ ಜನಾಂಗದ ಇತಿಹಾಸ ಗೊತ್ತಿಲ್ಲದ ಕಾರಣಕ್ಕಾಗಿಯೇ ಇನ್ನು ಸಮಾಜದ ಮುಖ್ಯವಾಹಿನಿಗೆ ಬರಲು ಆಗುತ್ತಿಲ್ಲ.
ಹಿಂಸೆಯನ್ನು ವಿರೋಧಿಸುತ್ತಿದ್ದ ಬುದ್ದನ ಪಂಚಶೀಲ ತತ್ವಗಳು ಕೇವಲ ಒಲೆ ಮಾದಿಗರಿಗಷ್ಟೆ ಮೀಸಲಲ್ಲ. ಇಡಿ ಮನುಕುಲಕ್ಕೆ ಅನ್ವಯವಾಗುತ್ತದೆ. ಹಿಂದೂ ಧರ್ಮದಲ್ಲಿ ಪ್ರಾಣಿ ಬಲಿ ನಿಲ್ಲಿಸಿ ಎನ್ನುವ ಮಾತಿಲ್ಲ. ಹಿಂಸೆಯ ವಿರುದ್ದ ಮೊಟ್ಟ ಮೊದಲು ಮಾತನಾಡಿದ್ದೆ ಗೌತಮ ಬುದ್ದ ಎನ್ನುವುದನ್ನು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಧಮ್ಮ ಬುದ್ದ ಧರ್ಮ ಬೇರೆ ಧರ್ಮಕ್ಕಿಂತ ಭಿನ್ನವಾದುದು. ಲಿಂಗಾಯಿತ ಧರ್ಮದಲ್ಲಿನ ಎಲ್ಲಾ ಜಾತಿಯವರು ಮೂಲತಃ ಬುದ್ದಿಷ್ಟಿಗಳೆ. ಬುದ್ದ ಧರ್ಮ ವ್ಯಾಪಕವಾಗಿ ಎಲ್ಲಾ ಕಡೆ ಹರಡುತ್ತಿರುವುದು ಯಜ್ಞ ಯಾಗಾಧಿಗಳಲ್ಲಿ ತೊಡಗಿರುವವರಿಗೆ ಭಯವುಂಟಾಗಿದೆ. ಬುದ್ದ ಧಮ್ಮ ಎಲ್ಲಾ ಶೋಷಿತ ಜಾತಿಗಳ ಧಮ್ಮ. ನವಯಾನ ಬುದ್ದ ಧಮ್ಮದಲ್ಲಿ ಗ್ರಂಥವಿದೆ. ಓದಿಕೊಂಡು ಬುದ್ದ ಧಮ್ಮದ ಒಳಗಡೆ ಎಲ್ಲರೂ ಸಾಗೋಣ ಎಂದರು.
ನಿವೃತ್ತ ಪ್ರಾಚಾರ್ಯರಾದ ಡಾ.ವಿ.ಬಸವರಾಜ್ ಮಾತನಾಡಿ ಹಿಂದುಳಿದವರು, ದಲಿತರು, ಶೋಷಿತರು ಇನ್ನು ಪ್ರಜ್ಞಾವಸ್ಥೆಗೆ ತಲುಪಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು. ನವಯಾನ ಬುದ್ದ ಧಮ್ಮದ ದಾರಿಯಲ್ಲಿ ಎಲ್ಲರೂ ಸಾಗಿದಾಗ ಶೋಷಿತ ಸಮುದಾಯ, ಹಿಂದುಳಿದವರ ವಿಮೋಚನೆ ಸಾಧ್ಯ. ಯಾವುದೋ ಆಸೆ ಆಮಿಷಗಳಿಂದ ಇನ್ನು ಹೊರಬಂದಿಲ್ಲ. ಸಂವಿಧಾನವೇ ಹಿಂದುಳಿದವರಿಗೆ ಅರ್ಥವಾಗಿಲ್ಲ. ಸಾಮಾಜಿಕ ಕ್ರಾಂತಿಯಾಗಬೇಕಾಗಿರುವುದರಿಂದ ಹಿಂದುಳಿದ ವರ್ಗಗಳ ಮನೆಯಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು. ಮಡಿವಾಳ ಸಮಾಜದ ಶಿವಲಿಂಗಪ್ಪನವರ ನಿವಾಸದಲ್ಲಿ ನವಯಾನ ಬುದ್ದ ಧಮ್ಮ ನೂರನೆ ಸರಣಿ ಕಾರ್ಯಕ್ರಮ ನಡೆಯುತ್ತಿರುವುದು ತುಂಬಾ ಸಂತೋಷದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬುದ್ದ ಎಂದರೆ ಎಚ್ಚರದ ಸ್ಥಿತಿ. ಬುದ್ದನನ್ನು ಎಲ್ಲರೂ ಆರಾಧನೆ ಮಾಡಬೇಕಿದೆ. ದುಃಖ, ನೋವು, ಅತಿಯಾಸೆಯಿಂದ ಮಾನವ ಹೊರಬರಬೇಕೆಂದು ಬುದ್ದ ಹೇಳಿದ್ದಾನೆ. ಬುದ್ದನ ಮಾರ್ಗದಲ್ಲಿ ಸಾಗಿದಾಗ ನಿಜವಾದ ಶಕ್ತಿ ಬರುತ್ತದೆ ಎಂದು ಹೇಳಿದರು.
ಲೇಖಕ ಹೆಚ್.ಆನಂದ್‍ಕುಮಾರ್ ಮಾತನಾಡುತ್ತ ಗೌತಮ ಬುದ್ದ ಅವ್ವ ಸಂಸ್ಕøತಿಯನ್ನು ಎತ್ತಿಹಿಡಿದರು. ಎಲ್ಲರನ್ನು ಅಪ್ಪಿಕೊಳ್ಳುವ ಸಂಸ್ಕøತಿ ಅವರದು. ಮಹಿಳೆಯರನ್ನು ಪೂಜ್ಯ ಗೌರವದಿಂದ ಕಾಣಬೇಕೆಂಬುದು ಅವರ ಆಸೆಯಾಗಿತ್ತು. ಹಿಂಸೆಯನ್ನು ಸದಾ ವಿರೋಧಿಸುತ್ತಿದ್ದ ಬುದ್ದ ಅತಿಯಾಸೆಯೆ ದುಃಖಕ್ಕೆ ಮೂಲಕ ಕಾರಣ ಎನ್ನುವ ಸಂದೇಶವನ್ನು ಸಮಾಜಕ್ಕೆ ಸಾರಿದರು. ನವಯಾನ ಬುದ್ದ ಧಮ್ಮ ಒಂದು ಸಂವಾದ ನೂರನೆ ಸರಣಿ ಕಾರ್ಯಕ್ರಮ ಮಡಿವಾಳ ಸಮಾಜಕ್ಕೆ ಸೇರಿದ ಶಿವಲಿಂಗಪ್ಪನವರ ಮನೆಯಲ್ಲಿ ನಡೆಯುತ್ತಿರುವುದು ನಿಜಕ್ಕೂ ಅರ್ಥಪೂರ್ಣ ಎಂದು ಪ್ರಶಂಶಿಸಿದರು.
ಶಿವಲಿಂಗಪ್ಪ ರಂಜಿತ ದಂಪತಿ, ಮಕ್ಕಳು, ಶಿವಲಿಂಗಪ್ಪನವರ ತಾಯಿ ಗೌರಮ್ಮ ಬಸಪ್ಪ, ಕೆ.ಕುಮಾರ್, ಡಿ.ದುರುಗೇಶಪ್ಪ, ರಾಮುಗೋಸಾಯಿ, ನಿವೃತ್ತ ತಹಶೀಲ್ದಾರ್ ಮಲ್ಲಿಕಾರ್ಜುನ್, ಸಹಾಯಕ ಪ್ರಾಧ್ಯಾಪಕ ಡಾ. ಸಂಜೀವ್ ಕುಮಾರ್ ಪೋತೆ, ವಿಶ್ವಾನಂದ್, ಗೋಪಾಲಣ್ಣ ಜೆ.ಜೆ.ಹಟ್ಟಿ, ಚಿಕ್ಕಣ್ಣ, ಟಿ.ರಾಮು, ನ್ಯಾಯವಾದಿ ರಮೇಶ್, ಪ್ರದೀಪ್, ಡಾ.ಕುಮಾರ್, ಶಿಕ್ಷಕ ಸಿದ್ದೇಶ್ವರ, ಗಂಗಾಧರ್ ಇನ್ನು ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.