ಸುದ್ದಿಒನ್, ಚಿತ್ರದುರ್ಗ, (ಅ.31) : ದಿನಗೂಲಿ ಮತ್ತು ಕ್ಷೇಮಾಭಿವೃದ್ದಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸದ ಕಾರಣ ನವೆಂಬರ್ ತಿಂಗಳ 3ನೇ ವಾರದಲ್ಲಿ ಜಿಲ್ಲಾ ಪಂಚಾಯತ್ ಕಚೇರಿ ಮುಂದೆ ಅನಿರ್ದಿಷ್ಟ ಧರಣಿ ನಡೆಸಲಾಗುತ್ತದೆ ಎಂದು ಸಂಘದ ಜಿಲ್ಲಾಧ್ಯಕ್ಷ ನಾಗರಾಜ್ ಸಂಗಂ ಹೇಳಿದರು.
ನಗರದ ರೋಟರಿ ಬಾಲಭವನ ಸಮೀಪವಿರುವ ಜಿಲ್ಲಾ ವೀರಶೈವ ಲಿಂಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ದಿನಗೂಲಿ ನೌಕರರಿಗೆ ಕಳೆದ ಏಪ್ರಿಲ್‍ನಿಂದ ವೇತನ ಪಾವತಿಯಾಗಿರುವುದಿಲ್ಲ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆದಿದ್ದು, ತಕ್ಷಣವೇ ವೇತನ ನೀಡುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದರೂ ಇದುವರೆವಿಗೂ ವೇತನ ಪಾವತಿಯಾಗಿರುವುದಿಲ್ಲ. ಈ ಕಾರಣದಿಂದಾಗಿ ಇಂದಿನ ಸಭೆಯಲ್ಲಿ ಚರ್ಚಿಸಿ ಜಿಲ್ಲಾ ಪಂಚಾಯತ್ ಕಚೇರಿ ಮುಂದೆ ಅನಿರ್ದಿಷ್ಟ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಈ ಸಭೆಯಲ್ಲಿ 100ಕ್ಕೂ ಹೆಚ್ಚು ನೌಕರರು, ರಾಜ್ಯಾಧ್ಯಕ್ಷೆ ಹೇಮಾವತಿ, ಪದಾಧಿಕಾರಿಗಳದ ಆರ್. ರಂಗಪ್ಪ, ನಾಗರಾಜ್, ಪಾಲಯ್ಯ, ಮಂಜುನಾಥ್ ಸ್ವಾಮಿ, ಕೆಂಚಮ್ಮ, ಅಶೋಕ್, ರಾಜಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.