ಚಿತ್ರದುರ್ಗ, ಡಿಸೆಂಬರ್.16 : ಚಿತ್ರದುರ್ಗ-ಭದ್ರಾ ಮೇಲ್ದಂಡೆ ಯೋಜನೆಗೆ ಅಡ್ಡಿಯಾಗಿರುವ ಭೂ ಸ್ವಾಧೀನ ಸೇರಿದಂತೆ ಹಲವು ಸಮಸ್ಯೆಗಳ ನಿವಾರಣೆ ಸಂಬಂಧ ಉಪ ಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಜನವರಿ ಎರಡನೇ ವಾರ ಸಮನ್ವಯ ಸಮಿತಿ ಸಭೆ ನಡೆಸಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ಶನಿವಾರ ಇಲ್ಲಿ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪದಾಧಿಕಾರಿಗಳೊಂದಿಗೆ ಮಾತನಾಡಿದ ಅವರು ತರಿಕೆರೆ ತಾಲೂಕಿನಲ್ಲಿ ಭೂ ಸ್ವಾಧೀನ ಸಮಸ್ಯೆ ಇದೆ. ಹಾಗಾಗಿ ಸಭೆಯನ್ನು ಚಿ್ತ್ರದುರ್ಗದಲ್ಲಿ ಕರೆಯಬೇಕೋ ಅಥವಾ ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಯೋಜಿಸಬೇಕೋ ಎಂಬುದರ ಬಗ್ಗೆ ಎರಡೂ ಜಿಲ್ಲೆಗಳ ಶಾಸಕರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಭದ್ರಾ ಮೇಲ್ದಂಡೆ ವಿಚಾರ ಬೆಳಗಾವಿ ಅಧಿವೇಶನದಲ್ಲಿಯೂ ಚರ್ಚೆಯಾಗಿದೆ. ಶಾಸಕ ರಘುಮೂರ್ತಿ ಸರ್ಕಾರದ ಗಮನ ಸೆಳೆದಿದ್ದಾರೆ. ನಾವೂ ಕೂಡಾ ಸಚಿವ ಡಿ.ಕೆ.ಶಿವಕುಮಾರ್ ಸಂಗಡ ಮಾತನಾಡಿದ್ದು ಈ ತಿಂಗಳಲ್ಲಿ ಸಭೆ ಮಾಡುವ ಬಗ್ಗೆ ವಿನಂತಿಸಿದ್ದೆವು. ಡಿಸೆಂಬರ್ ನಲ್ಲಿ ಬೇಡ ಎಂದಿದ್ದರಿಂದ ಜನವರಿಯಲ್ಲಿ ಸಭೆ ನಡೆಸುತ್ತೇವೆ. ಇದಕ್ಕೂ ಮುನ್ನ ಅಧಿಕಾರಿಗಳ ಸಭೆ ನಡೆಸಿ ವಾಸ್ತವಾಂಶಗಳ ಕ್ರೋಡೀಕರಿಸಲಾಗುವುದೆಂದರು.
ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ ಭದ್ರಾ ಮೇಲ್ದಂಡೆ ಬಗ್ಗೆ ನಾವ್ಯಾರೂ ಉದಾಸೀನ ತೋರಿಲ್ಲ. ಅಧಿಕಾರಿಗಳ ಮೂಲಕ ಶೀಘ್ರ ಕಾರ್ಯನುಷ್ಠಾನಕ್ಕೆ ಒತ್ತಡ ಹೇರಿದ್ದೇವೆ. ಅಬ್ಬಿನಹೊಳಲು ಬಳಿಯ ಭೂ ಸ್ವಾಧೀನ ತೊಡಕು ನಿವಾರಣೆ ಅಲ್ಲಿನ ಶಾಸಕರ ಸಮ್ಮುಖದಲ್ಲಿಯೇ ಆಗಬೇಕಿದೆ. ಈ ವಿಷಯವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಗಮನಕ್ಕೆ ತಂದಿದ್ದೇವೆ. ಬಗೆ ಹರಿಸುವ ಭರವಸೆ ನೀಡಿದ್ದಾರೆಂದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ, ಭದ್ರಾ ಮೇಲ್ದಂಡೆ ವಿಚಾರವಾಗಿ ಜಿಲ್ಲೆಯ ಎಲ್ಲ ಶಾಸಕರು ಒಟ್ಟಾಗಿದ್ದೇವೆ. ಯೋಜನೆ ನೀರಿಗೆ ಮೇಲ್ಬಾಗದ ಅರಸಿಕೆರೆಯವರು ಕಣ್ಣು ಹಾಕುವ ಸಾಧ್ಯತೆಗಳು ಹೆಚ್ಚಿವೆ. ಟೇಲ್ ಎಂಡ್ ಗೆ ನೀರು ಹಾಯಿಸಲೇಬೇಕು. ಚಳ್ಳಕೆರೆ, ಮೊಳಕಾಲ್ಮೂರು, ಜಗಳೂರು ಭಾಗಕ್ಕೆ ನೀರು ಹೋಗಲೇಬೇಕು. ಈಗಾಗಲೇ ಹಂಚಿಕೆಯಾಗಿರುವ ನೀರು ಹೊಸದಾಗಿ ಬೇರೆ ತಾಲೂಕಿಗೆ ಹೋಗದಂತೆ ಎಚ್ಚರ ವಹಿಸಿದ್ದೇವೆ. ಅಗತ್ಯ ಬಂದಲ್ಲಿ ನ್ಯಾಯಾಲಯದ ಮೊರೆ ಹೋಗಲು ಸಿದ್ದವಿರುವುದಾಗಿ ಹೇಳಿದರು.
ಭದ್ರಾ ಮೇಲ್ದಂಡೆಗೆ ಕೇಂದ್ರ ಘೋಷಿಸಿರುವ 5300 ಕೋಟಿ ರುಪಾಯಿ ಅನುದಾನ ತರುವ ಬಗ್ಗೆ ಮುಖ್ಯಮಂತ್ರಿಗಳು ಆಸಕ್ತಿ ವಹಿಸಿದ್ದಾರೆ. ಈ ಸಂಬಂಧ ಸರ್ವ ಪಕ್ಷಗಳ ನಿಯೋಗ ತೆರಳಲು ಉದ್ದೇಶಿಸಿದ್ದು ಪ್ರತಿ ಪಕ್ಷದ ನಾಯಕರಲ್ಲಿ ಪ್ರಧಾನಿ ಸಮಯಕ್ಕೆ ವಿನಂತಿಸಿದ್ದಾರೆ ಎಂದು ರಘುಮೂರ್ತಿ ಹೇಳಿದರು.
ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಮಾತನಾಡಿ, ಅಬ್ಬಿನಹೊಳಲು ಸಮಸ್ಯೆ ಬಗೆ ಹರಿದಿದ್ದರೆ ಇಷ್ಟೊತ್ತಿಗೆ ಹೊಳಲ್ಕೆರೆ ತಾೂಲೂಕಿನ ಕೆರೆಗಳು ತುಂಬುತ್ತಿದ್ದವು. ಮುಂಬರುವ ಬೇಸಗೆಯಲ್ಲಾದರೂ ಕಾಲುವೆ ನಿರ್ಮಾಣದ ಕೆಲಸ ಪೂರ್ಣಗೊಳ್ಳುವ ನಿಟ್ಟಿನಲ್ಲಿ ಇಚ್ಚಾ ಶಕ್ತಿಗಳು ಪ್ರದರ್ಶನವಾಗಬೇಕಿದೆ. ಸಮನ್ವಯ ಸಮಿತಿ ಸಭೆಯಲ್ಲಿ ಎಲ್ಲವೂ ಅಂತಿಮವಾಗುವಂತೆ ಜಿಲ್ಲೆಯ ಶಾಸಕರು, ಸಚಿವರು ನೋಡಿಕೊಳ್ಳಬೇಕೆಂದು ಮನವಿ ಮಾಡಿದರು. ಸಮಿತಿ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ ಇದ್ದರು.