ವರದಿ : ಕೆ.ಎಂ. ಮುತ್ತುಸ್ವಾಮಿ ಕಣ್ಣನ್
ಸುದ್ದಿಒನ್, ಚಿತ್ರದುರ್ಗ, (ಅ.31): ದೇಶಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ಹಿರಿಯರ ಇತಿಹಾಸಗಳನ್ನು ಇಂದಿನ ಯುವ ಪೀಳಿಗೆಗೆ ತಿಳಿಸಬೇಕು. ಇಲ್ಲದಿದ್ದರೆ ದೇಶದ್ರೋಹದಲ್ಲಿ ತೊಡಗಿ ದುಶ್ಚಟಗಳಿಗೆ ಬಲಿಯಾಗುವ ಸಾಧ್ಯತೆಗಳಿರುತ್ತವೆ ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ತಿಳಿಸಿದರು.
ರಾಷ್ಟ್ರೀಯ ಏಕತಾ ದಿನಾಚರಣೆ ಅಂಗವಾಗಿ ಇಲ್ಲಿನ ನೆಹರು ಯುವ ಕೇಂದ್ರದಲ್ಲಿ ಭಾನುವಾರ ನಡೆದ ಸರ್ದಾರ್ ವಲ್ಲಭಭಾಯಿ ಪಟೇಲ್‍ರವರ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಸರ್ದಾರ್ ವಲ್ಲಭಭಾಯಿ ಪಟೇಲ್‍ರವರನ್ನು ಭಾರತದ ಉಕ್ಕಿನ ಮನುಷ್ಯ ಎಂದು ಕರೆಯಲಾಗುತ್ತದೆ. ದೇಶದ ಸದೃಢತೆ, ಭಾವೈಕ್ಯತೆಗಾಗಿ ಹೋರಾಡಿದ ಅಂತಹ ಮಹಾನ್ ನಾಯಕರ ಆದರ್ಶ ತತ್ವಗಳನ್ನು ಇಂದಿನ ಪೀಳಿಗೆ ಮೈಗೂಡಿಸಿಕೊಂಡಾಗ ಮಾತ್ರ ದೇಶಭಕ್ತಿ ಮೂಡಲು ಸಾಧ್ಯ. ಆಗ ನಮ್ಮ ದೇಶದ ಹಿರಿಯ ನಾಯಕರುಗಳ ಹೆಸರು ಅಜರಾಮರವಾಗಿ ಉಳಿಯಲಿದೆ ಎಂದು ಹೇಳಿದರು.
ಸಹಾಯಕ ಪ್ರಾಧ್ಯಾಪಕ ಭರಮಸಾಗರದ ಲೋಕೇಶ್ ಮಾತನಾಡಿ 562 ಸಂಸ್ಥಾನಗಳನ್ನು ಒಂದುಗೂಡಿಸುವ ಸಂದರ್ಭದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್‍ರವರು ಕೈಗೊಂಡ ದಿಟ್ಟ ನಿಲುವು ತುಂಬಾ ಪರಿಣಾಮಕಾರಿಯಾಗಿತ್ತು. ಅನೇಕ ಯುದ್ದ, ಸಾವು-ನೋವುಗಳು ಸಂಭವಿಸುತ್ತಿದ್ದ ಕಾಲದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್‍ರವರು ಭಾರತದ ಐಕ್ಯತೆ ಮತ್ತು ಅಖಂಡತೆಯನ್ನು ಕಾಪಾಡಿಕೊಂಡು ಬಂದರು. ರಾಷ್ಟ್ರಕ್ಕೆ ಮಾದರಿಯಾಗಿದ್ದ ಅಂತಹವರ ಆದರ್ಶಗಳನ್ನು ಇಂದಿನ ಯುವ ಸಮೂಹ ಪಾಲಿಸುವುದೇ ಅವರಿಗೆ ನಿಜವಾಗಿ ನೀಡುವ ಬಹುದೊಡ್ಡ ಗೌರವ ಎಂದರು.
ನೆಹರು ಯುವ ಕೇಂದ್ರದ ಯುವ ಸಮನ್ವಯಾಧಿಕಾರಿ ಎನ್.ಸುಹಾಸ್, ಭಾರತೀಯ ರೆಡ್‍ಕ್ರಾಸ್‍ನ ಮಜಹರ್‍ವುಲ್ಲಾ, ಅರುಣ್‍ಕುಮಾರ್, ಶ್ರೀನಿವಾಸ್ ಮಳಲಿ, ಹೊಳಲ್ಕೆರೆ ಎ.ಪಿ.ಎಂ.ಸಿ. ಕಾರ್ಯದರ್ಶಿ ಸುರೇಂದ್ರಬಾಬು, ಅಮೃತ ಸ್ಕೂಲ್ ಆಫ್ ನರ್ಸಿಂಗ್‍ನ ಪ್ರಾಚಾರ್ಯರಾದ ಹಜಾತ್‍ವುಲ್ಲಾ ವೇದಿಕೆಯಲ್ಲಿದ್ದರು.
ಜಾನಪದ ಹಾಡುಗಾರ ಗಂಗಾಧರ್ ಕಾರ್ಯಕ್ರಮ ನಿರೂಪಿಸಿದರು.
ಸ್ವಚ್ಚತೆ ಅಭಿಯಾನದಲ್ಲಿ ಭಾಗವಹಿಸಿ ಅತಿ ಹೆಚ್ಚು ಪ್ಲಾಸ್ಟಿಕ್‍ಗಳನ್ನು ಸಂಗ್ರಹಿಸಿದ ಭರತ್ ಜಿ.ಪಿ, ಆರೋಗ್ಯ ಭಾಗ್ಯ ಯುವಕರ ಸಂಘ ಹಾಗೂ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯವರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.