ನವದೆಹಲಿ: ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಆದ್ರೆ ಈ ಬಾರಿ ಹರಿಯಾಣ ಸರ್ಕಾರ ಮಹತ್ವ ನಿರ್ಧಾರವೊಂದನ್ನ ಕೈಗೆತ್ತಿಕೊಂಡಿದೆ. ದೆಹಲಿಯ ಸುತ್ತ ಮುತ್ತ 14 ಜಿಲ್ಲೆಗಳಲ್ಲಿ ಪಟಾಕಿ ನಿಷೇಧ ಮಾಡಿದೆ. ಅಂಗಡಿಗಳಲ್ಲಷ್ಟೇ ಅಲ್ಲ ಆನ್ಲೈನ್ ಮಾರಾಟ ಮತ್ತು ಹೊಡೆಯುವುದನ್ನು ನಿಷೇಧಿಸಿದೆ.
ಭಿವಾನಿ, ಛಾರ್ಖಿ ದಾದ್ರಿ, ಫರೀದಾಬಾದ್, ಗುರುಗ್ರಾಮ, ಝಜ್ಜರ್, ಜಿಂದ್, ಕರ್ನಾಲ್, ಮಹೇಂದ್ರಘರ್, ನಹ್, ಪಲ್ವಾಲ್, ಪಾಣಿಪತ್, ರೆವಾರಿ, ರೋಹ್ಟಕ್, ಸೋನಿಪತ್ ಜಿಲ್ಲೆಗಳಲ್ಲಿ ಪಟಾಕಿ ಮಾರಾಟ ಮತ್ತು ಸಿಡಿಸುವುದನ್ನು ನಿಷೇಧಿಸಿದೆ.
ಸದ್ಯ ಕೋವಿಡ್ ನಿಂದ ಸಾಕಷ್ಟು ಜನ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಹೋಂ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗೆ ಪಟಾಕಿ ಸಿಡಿಸುವುದರಿಂದ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತೆ. ಹೀಗಾಗಿ ಪಟಾಕಿ ಸಿಡಿಸುವುದನ್ನ ನಿಷೇಧಿಸಲಾಗಿದೆ. ಈ ಬಗ್ಗೆ ಹರಿಯಾಣ ಸರ್ಕಾರ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ನಗರ ಮತ್ತು ಪಟ್ಟಣಗಳಲ್ಲಿ ಪಟಾಕಿ ಸಿಡಿಸುವವರು ಹಸಿರು ಪಟಾಕಿಯನ್ನೇ ಸಿಡಿಸಲು ಸೂಚನೆ ನೀಡಲಾಗಿದೆ. ಪಟಾಕಿಯಿಂದ ಅಪಾಯವೇ ಜಾಸ್ತಿ ಇರುವ ಕಾರಣ ಹರಿಯಾಣ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.