ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.12 : : ಇಸ್ರೇಲ್-ಹಮಾಸ್ ನಡುವೆ ನಡೆಯುತ್ತಿರುವ ಯುದ್ದ ಕೊನೆಗೊಂಡು ಶಾಂತಿ ನೆಲೆಸಲಿ ಎಂದು ಯುನೈಟೆಡ್ ಕ್ರಿಶ್ಚಿಯನ್ ಫೋರಂ ಯೂಮನ್ ರೈಟ್ಸ್ ನಿಂದ ಪ್ರವಾಸಿ ಮಂದಿರದಲ್ಲಿ ಸೋಮವಾರ ಪ್ರಾರ್ಥನೆ ಸಲ್ಲಿಸಲಾಯಿತು.
ಯುದ್ದದಿಂದ ಮಹಿಳೆಯರ ಮಾನಭಂಗ, ಪುಟ್ಟ ಮಕ್ಕಳ ಹತ್ಯೆ ಕ್ಷಮಿಸಲಾಗದು. ದಯಾಮಯನಾದ ಏಸು ಅಲ್ಲಿನ ಉಗ್ರರ ಮನಸ್ಸು ಪರಿವರ್ತನೆಗೊಳಿಸಲಿ. ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಅಮಾಯಕರು, ಮುಗ್ದರು, ಶೋಷಣೆಗೊಳಗಾಗುತ್ತಿದ್ದಾರೆ. ವಿಶ್ವಸಂಸ್ಥೆ ಬಿಗಿ ನಿಲುವು ತಾಳಿ ಇಸ್ರೇಲ್-ಹಮಾಸ್ ಯುದ್ದ ವನ್ನು ನಿಲ್ಲಿಸಬೇಕು. ಚಿಕ್ಕ ರಾಷ್ಟ್ರ ಇಸ್ರೇಲ್ ಶಕ್ತಿಶಾಲಿಯಾಗಿ ಬೆಳೆದಿರುವುದರಿಂದ ಹಮಾಸ್ ಉಗ್ರರಿಗೆ ಪ್ರತ್ಯುತ್ತರ ನೀಡುತ್ತಿದೆ. ಆದರೂ ಯುದ್ದ ಎಂದ ಮೇಲೆ ಏನು ಅರಿಯದ ಮುಗ್ದರ ಜೀವ ಹರಣವಾಗುತ್ತದೆ. ಶಾಂತಿಧೂತನಾದ ಏಸು ಯುದ್ದವನ್ನು ಅಂತ್ಯಗೊಳಿಸಿ ನೆಮ್ಮದಿ ನೆಲೆಸುವಂತೆ ಪ್ರೇರೇಪಿಸಲಿ ಎಂದು ಪ್ರಾರ್ಥಿಸಲಾಯಿತು.
ಯುನೈಟೆಡ್ ಕ್ರಿಶ್ಚಿಯನ್ ಫೋರಂ ಯೂಮನ್ ರೈಟ್ಸ್ ಜಿಲ್ಲಾಧ್ಯಕ್ಷ ಫಾದರ್ ಸಜ್ಜಿಜಾರ್ಜ್, ಪ್ರಧಾನ ಕಾರ್ಯದರ್ಶಿ ರೆವೆರಂಡ್ ಫಾದರ್ ಎಂ.ಎಸ್.ರಾಜು ಇನ್ನು ಮೊದಲಾದವರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.