ಬೆಂಗಳೂರು: ಹಿರಿಯ ನಟಿ ಲೀಲಾವತಿ ಇಹಲೋಕ ತ್ಯಜಿಸಿ ಇಂದಿಗೆ ನಾಲ್ಕು ದಿನ. ಬಹುಭಾಷಾ ನಟಿಯನ್ನು ಕಳೆದುಕೊಂಡು ಗಣ್ಯರೆಲ್ಲ ಕಂಬನಿ ಮಿಡಿದಿದ್ದಾರೆ. ಅವರ ಅಗಾಧ ಪ್ರತಿಭೆ, ಮಾನವೀಯತೆ, ಸಮಾಜ ಸೇವೆ ನೆನೆದು ಕಣ್ಣೀರು ಹಾಕಿದ್ದಾರೆ. ಲೀಲಾವತಿ ಅಮ್ಮನವರು ಸಮಾಜಸೇವೆಗೆ ತಮ್ಮ ಜೀವನ ಮುಡಿಪಾಗಿಟ್ಟಿದ್ದವರು. ಪ್ರಾಣಿಗಳು ಎಂದರೆ ಪ್ರಾಣ ಬಿಡುತ್ತಾ ಇದ್ದರು. ಅದಕ್ಕೆ ಅವರ ಕೊನೆಯ ಆಸೆ ಪಶು ವೈದ್ಯಕೀಯ ಆಸ್ಪತ್ರೆ ಉದ್ಘಾಟನೆ ಮಾಡಿ, ಬಳಿಕ ನಿಧನರಾದರು.
ಇಂಥ ಅದ್ಬುತ ಕಲಾವಿದೆ, ಮಾನವೀಯತೆಯ ಮಮತೆಯ ತಾಯಿಯ ಹೆಸರನ್ನು ರಸ್ತೆಗೆ ಇಡಲು ಮನವಿ ಮಾಡಲಾಗಿದೆ. ಬಿಬಿಎಂಪಿ ನೌಕರರ ಸಂಘದವರಿಂದ ಈ ಮನವಿ ಮಾಡಲಾಗಿದ್ದು, ನೆಲಮಂಗಲದಿಂದ ಯಶವಂತಪುರದ ರಸ್ತೆಗೆ ಲೀಲಾವತಿ ಅವರ ಹೆಸರಿಡಲು ಪಾಲಿಕೆ ಆಯುಕ್ತರಿಗೆ ಪತ್ರ ಬರೆಯಲಾಗಿದೆ.
ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್ ಪತ್ರ ಬರೆದಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆಗಳಿಗೆ ಹಲವು ಗಣ್ಯರ ಹೆಸರಿಡಲಾಗಿದೆ. ಕನ್ನಡ ಪರ ಹೋರಾಟಗಾರರು, ಸ್ವಾತಂತ್ರ್ಯ ಹೋರಾಟಗಾರು, ಹಿರಿಯ ನಟರು ಸೇರಿ ಹಲವು ಗಣ್ಯರ ಹೆಸರಿಡಲಾಗಿದೆ. ಅದರಂತೆಯೇ ದಿವಂಗತ ಲೀಲಾವತಿ ಅವರು ಸಾಕಷ್ಟು ಸಮಾಜಸೇವೆ ಮಾಡಿದ್ದಾರೆ.