ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 10 : ಕಾಂಗ್ರೆಸ್ ಪಕ್ಷ ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ನನಗೆ ಸ್ಪರ್ಧೆ ಮಾಡಲು ಟಿಕೇಟ್ ನೀಡಿದರೆ ಮತದಾರರು ನನ್ನ ಕೈ ಹಿಡಿದರೆ ಈ ಭಾಗದ ಜನತೆ ಆರೋಗ್ಯ, ಶಿಕ್ಷಣ, ಕೃಷಿ, ಕಾರ್ಮಿಕರಿಗೆ ಮತ್ತು ರೈತರಿಗೆ ನೆರವಾಗುವಂತ ಕಾರ್ಯಕ್ರಮಗಳನ್ನು ಹಾಕಿ ಕೊಳ್ಳಲಾಗುವುದು ಎಂದು ಚಿತ್ರದುರ್ಗ ಲೋಕಸಭಾ ಕಾಂಗ್ರೆಸ್ ಪಕ್ಷ ಟಿಕೆಟ್ ಆಕಾಂಕ್ಷಿ ಹೆಚ್.ವಿ. ಕುಮಾರಸ್ವಾಮಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಬಿಎಸ್‍ಸಿ ಅಗ್ರಿಕಲ್ಚರ್ ವಿದ್ಯಾಭ್ಯಾಸವನ್ನು ಮಾಡಿದ್ದು, ರೈತಾಪಿ ಕುಟುಂಬದವನಾಗಿದ್ದೇನೆ. ನನ್ನ ತಂದೆಯಾದ ವೆಂಕಟರಮಣಪ್ಪ ದೆಸೆಯಿಂದ ಕಳೆದ 30 ವರ್ಷದಿಂದ ರಾಜಕೀಯದಲ್ಲಿದ್ದೇನೆ.
ಕಾಂಗ್ರೆಸ್‍ನಲ್ಲಿ ವಿವಿಧ ರೀತಿಯ ಹುದ್ದೆಗಳನ್ನು ಅಲಂಕರಿಸಿ ಕೆಲಸವನ್ನು ಮಾಡಿದ್ದೇನೆ. ನನಗೆ ಬಡವರ, ಕಾರ್ಮಿಕರ ಕಷ್ಟ ಏನೆಂದು ಗೊತ್ತಿದೆ ಅದರ ಬಗ್ಗೆಯೂ ಚಿಂತನೆಯು ಸಹಾ ಇದೆ. ಇಲ್ಲಿ ಲೋಕಸಭಾ ಸದಸ್ಯರಾದವರು ಲೋಕಸಭೆಯಲ್ಲಿ ಕ್ಷೇತ್ರದ ಪ್ರಗತಿಯ ಬಗ್ಗೆ ಯಾವ ಮಾತನ್ನು ಸಹಾ ಆಡುವುದಿಲ್ಲ. ಅಲ್ಲದೆ ಕ್ಷೇತ್ರದಲ್ಲಿ ಪ್ರಗತಿಯನ್ನು ಸಹಾ ಮಾಡುವುದಿಲ್ಲ, ಚಿತ್ರದುರ್ಗ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಜಾಗವಾಗಿದ ಅದರ ಬಗ್ಗೆ ಯಾವ ಸಂಸದ ಸದಸ್ಯರು ಸಹಾ ಗಮನ ನೀಡಿಲ್ಲ, ಅಲ್ಲದೆ ಪಾವಗಡದಲ್ಲಿ ಸೋಲಾರ್ ಪಾರ್ಕನ್ನು ಹಾಕುವುದರ ಮೂಲಕ ವಿದ್ಯುತ್ ಉತ್ಪಾದನೆಯನ್ನು ಮಾಡಲಾಗುತ್ತಿದೆ. ಇದರ ಬಗ್ಗೆಯೂ ಸಹಾ ಯಾರು ಗಮನ ನೀಡುತ್ತಿಲ್ಲ ಎಂದು ವಿಷಾಧಿಸಿದರು.
ಕಳೆದ ಎರಡು ಬಾರಿ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ಟಿಕೆಟ್ ಕೈ ತಪ್ಪಿತು. ಈ ಬಾರಿ ನನಗೆ ಟಿಕೆಟ್ ಸಿಗುವ ನಿರೀಕ್ಷೆ ಇದೆ. ಅಲ್ಲದೆ ಇಲ್ಲಿ ನನ್ನ ಭೋವಿ ಸಮುದಾಯವರು 2 ಲಕ್ಷ ಜನರಿದ್ದಾರೆ. ಮಠ ಇದೆ ಶ್ರೀಗಳ ಆರ್ಶಿವಾದ ನನ್ನ ಮೇಲೆ ಇದೆ. ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಸಮಾಜಿಕ ನ್ಯಾಯದ ಮೇಲೆ ಈ ಬಾರಿ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಭೋವಿ ಸಮುದಾಯಕ್ಕೆ ಟಿಕೆಟ್ ನೀಡುತ್ತಾರೆ ಎಂಬ ನಂಬಿಕೆ ಇದೆ. ಈ ಹಿನ್ನಲೆಯಲ್ಲಿ ಕ್ಷೇತ್ರವನ್ನು ಪ್ರವಾಸ ಮಾಡುವುದರ ಮೂಲಕ ಮತದಾರರನ್ನು ಭೇಟಿ ಅವರ ಕಷ್ಟಗಳನ್ನು ಆಲಿಸಲಾಗುತ್ತಿದೆ.
ಈ ಬಾರಿ ನನಗೆ ಟೀಕೇಟ್‍ನ್ನು ನೀಡುವಂತೆ ಪಕ್ಷದ ಹೈಕಮಾಂಡ್‍ಗೆ ಮನವಿಯನ್ನು ಮಾಡಲಾಗಿದೆ. ಅವರು ಸಹಾ ಕ್ಷೇತ್ರದಲ್ಲಿ ಪ್ರವಾಸವನ್ನು ಮಾಡುವಂತೆ ಸೂಚಿಸಿದ್ದಾರೆ ಎಂದರು.
ಈ ಕ್ಷೇತ್ರದ ಟೀಕೇಟ್ ಆಕಾಂಕ್ಷಿಯಾಗಿ ನನಗೆ ಇಲ್ಲಿನ ಸಮಸ್ಯೆಗಳ ಬಗ್ಗೆ ಅರಿವು ಇದೆ ಬರದ ನಾಡದ ಚಿತ್ರದುರ್ಗ ಮುಂದಿನ ದಿನಮಾನದಲ್ಲಿ ಮಲೆನಾಡಾಗಿ ಮಾರ್ಪಾಡಾಗಬೇಕಿದೆ. ಇದಕ್ಕಾಗಿ 1 ಕೋಟಿ ಸಸಿಗಳನ್ನು ನೆಡುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು, ಇದ್ದಲ್ಲದೆ ಪಂಚಾಯಿತಿಗೆ ಒಂದರಂತೆ ಹೈಟೆಕ್ ಶಾಲೆಯನ್ನು ನಿರ್ಮಾಣ ಮಾಡುವುದರ ಮೂಲಕ ಎಲ್ಲಾ ಮಕ್ಕಳು ಶಿಕ್ಷಣ ಪಡೆಯುವಂತಾಗಬೇಕು, ಇದರೊಂದಿಗೆ ತಾಲ್ಲೂಕಿಗೆ ಒಂದರಂತೆ ಹೈಟೆಕ್ ಆಸ್ಪತ್ರೆಯನ್ನು ಸಹಾ ನಿರ್ಮಾಣ ಮಾಡುವ ಯೋಚನೆ ಇದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವ ಕನಸು ನನ್ನದಾಗಿದೆ ಇದಕ್ಕೆ ಪಕ್ಷದ ಹೈಕಮಾಂಡ್ ಮತ್ತು ಮತದಾರರ ಒಲವು ಅಗತ್ಯವಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಗೋಷ್ಠಿಯಲ್ಲಿ ಧನಂಜಯ, ಮಂಜುನಾಥ್, ಸೋಮಶೇಖರ ರೆಡ್ಡಿ, ಮೇಘರಾಜ್, ಬಾಲಕೃಷ್ಣ, ಬಾಬು ಸೇರಿದಂತೆ ಇತರರು ಭಾಗವಹಿಸಿದ್ದರು.