ದೇಶದಾದ್ಯಂತ ವಿದ್ಯುತ್ ವ್ಯತ್ಯಯ : ಕತ್ತಲಲ್ಲಿ ಮುಳುಗಿದ  ಶ್ರೀಲಂಕಾ

ಶ್ರೀಲಂಕಾ : ಕೇವಲ ಪ್ರವಾಸೋದ್ಯಮವನ್ನೇ ಅವಲಂಬಿಸಿರುವ ದ್ವೀಪ ರಾಷ್ಟ್ರವಾದ ಶ್ರೀಲಂಕಾ ಕರೋನಾ ಮತ್ತು ಲಾಕ್‌ಡೌನ್‌ನಿಂದ ತೀವ್ರವಾಗಿ ನಲುಗಿತ್ತು. ಆ ನಂತರ ಆರ್ಥಿಕ ಬಿಕ್ಕಟ್ಟು ತಲೆದೋರಿದ ಹಿನ್ನೆಲೆಯಲ್ಲಿ ಅಂದಿನ ರಾಷ್ಟ್ರಪತಿ ಮತ್ತು ಪ್ರಧಾನಿ ಕೈ ಚೆಲ್ಲಿದ್ದರು. ಇದರಿಂದಾಗಿ ರಾಜಕೀಯ ಬಿಕ್ಕಟ್ಟು ಕೂಡ ಉದ್ಭವಿಸಿತ್ತು. 

ಈ ಕಾರಣದಿಂದಾಗಿ, 2022 ರಲ್ಲಿ, ಅತ್ಯಂತ ಭೀಕರ ಬರ, ಆಹಾರ, ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟುಗಳು ಆ ದೇಶವನ್ನು ಸುತ್ತುವರೆದಿತ್ತು. ನಂತರ ಆ ಆದೇಶದಲ್ಲಿ ಸರ್ಕಾರ ಬದಲಾಯಿತು. ಹೊಸ ಸರ್ಕಾರ ಬಂದ ಮೇಲೆ ಪರಿಸ್ಥಿತಿ ಈಗ ಸುಧಾರಿಸುತ್ತಿದೆ. ಆದರೆ, ಇತ್ತೀಚಿನ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಶ್ರೀಲಂಕಾಕ್ಕೆ ವಿದ್ಯುತ್ ಸಮಸ್ಯೆಯ ರೂಪದಲ್ಲಿ ಮತ್ತೊಂದು ಹೊಸ ಸಮಸ್ಯೆ ಎದುರಾಗಿದೆ.

ಶ್ರೀಲಂಕಾದಲ್ಲಿ ವಿದ್ಯುತ್ ಸರಬರಾಜಿನಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಇಡೀ ದೇಶದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಶ್ರೀಲಂಕಾದಲ್ಲಿ ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆಯನ್ನು ನೋಡಿಕೊಳ್ಳುವ ಸಿಲೋನ್ ವಿದ್ಯುತ್ ಮಂಡಳಿ ಈ ಕುರಿತು ಹೇಳಿಕೆ ನೀಡಿದೆ. ವಿದ್ಯುತ್ ಪೂರೈಕೆಯನ್ನು ಪುನಃಸ್ಥಾಪಿಸಲು ಯುದ್ಧೋಪಾದಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಸಿಇಬಿ ವಕ್ತಾರರು ತಿಳಿಸಿದ್ದಾರೆ. ವಿದ್ಯುತ್ ವ್ಯತ್ಯಯದಿಂದಾಗಿ ಇಂಟರ್ನೆಟ್ ಸೇವೆಗಳು ಸ್ಥಗಿತಗೊಂಡಿವೆ.

ಕ್ಯಾಟ್ಮೇಲ್ ಮತ್ತು ಬಿಯಾಗಮಾ ನಡುವಿನ ಮುಖ್ಯ ವಿದ್ಯುತ್ ಲೈನ್‌ಗಳಲ್ಲಿ ಸಮಸ್ಯೆ ಉಂಟಾಗಿದೆ.  ಇದರಿಂದ ದೇಶಾದ್ಯಂತ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2022ರಲ್ಲಿ ಶ್ರೀಲಂಕಾದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಶ್ರೀಲಂಕಾದಾದ್ಯಂತ ಇಂಧನ, ಆಹಾರ ಪದಾರ್ಥಗಳು ಮತ್ತು ಔಷಧಿಗಳ ಕೊರತೆಯಿದೆ.  ಮತ್ತೊಂದೆಡೆ, ವಿದೇಶಿ ವಿನಿಮಯ ಕಡಿಮೆಯಾಗುತ್ತಿರುವುದರಿಂದ, ಇತರ ದೇಶಗಳಿಂದ ಇಂಧನ ಆಮದು ಮಾಡಿಕೊಳ್ಳಲು ತೀವ್ರ ತೊಂದರೆಗಳನ್ನು ಎದುರಿಸುತ್ತಿದೆ.

ಕಳೆದ ಕೆಲವು ದಿನಗಳಿಂದ ಶ್ರೀಲಂಕಾದಲ್ಲಿ ವಿದ್ಯುತ್ ಕಡಿತ ಸಾಮಾನ್ಯವಾಗಿದೆ.  ಶ್ರೀಲಂಕಾದಲ್ಲಿ ಈಗಾಗಲೇ ದಿನಕ್ಕೆ ಸುಮಾರು 10 ಗಂಟೆಗಳ ಕಾಲ ವಿದ್ಯುತ್ ಕಡಿತವನ್ನು ವಿಧಿಸಲಾಗುತ್ತಿದೆ. ಇದೀಗ ಶ್ರೀಲಂಕಾದ ಜನರು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯಗೊಂಡಿರುವುದರಿಂದ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲದೇ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸ್ಥಿತಿ ಶೋಚನೀಯವಾಗಿದೆ. ರಾತ್ರಿ ವೇಳೆ ವಿದ್ಯುತ್ ಪೂರೈಕೆ ಇಲ್ಲದ ಕಾರಣ ಮಕ್ಕಳು, ವೃದ್ಧರು ಪರದಾಡುವಂತಾಗಿದೆ. ಸರಕಾರ ಹಾಗೂ ವಿದ್ಯುತ್‌ ಅಧಿಕಾರಿಗಳ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *