ಬೆಂಗಳೂರು: ಇಂದು ನಗರದ ಅರಮನೆ ಮೈದಾನದಲ್ಲಿ ಈಡಿಗ ಸಮುದಾಯದ ಬೃಹತ್ ಸಮಾವೇಶ ನಡೆದಿದೆ. ಈ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ತಾವು ಹಣಕಾಸು ಸಚಿವರಾಗಿದ್ದಾಗಿನ ಸಮಾವೇಶದ ಬಗ್ಗೆ ಮೆಲುಕು ಹಾಕಿದ್ದಾರೆ.
ಈಡಿಗ ಸಮುದಾಯದಿಂದ ಹಲವು ಬೇಡಿಕೆಗಳನ್ನು ಇಡಲಾಗಿದೆ. ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವ ಕಾರಣ ಯಾವುದೇ ಭರವಸೆ ಕೊಡುವುದಕ್ಕೆ ಆಗಲ್ಲ. ಅಧಿವೇಶನ ಮುಗಿದ ಬಳಿಕ ಬಂದು ಕಾಣುವುದಕ್ಕೆ ಹೇಳಿದ್ದೇನೆ. ಅಂದು 1995ರಲ್ಲೂ ಈಡಿಗ ಸಮಾವೇಶ ನಡೆದಿತ್ತು. ನಾನು ಹಣಕಾಸು ಸಚಿವನಾಗಿದ್ದೆ. ಜಾಲಪ್ಪ ಅವರು ಸೇರಿದಂತೆ ಎಲ್ಲರೂ ಸೇರಿ ಅರ್ಥಪೂರ್ಣವಾಗಿ ಕಾರ್ಯಕ್ರಮ ನಡೆಸಿದ್ದರು. ಅಂದಿನ ಮುಖ್ಯಮಂತ್ರಿಯಾಗಿದ್ದ ದೇವೇಗೌಡರು ಕೂಡ ಭಾಗವಹಿಸಿದ್ದರು.
ನಾರಾಯಣ ಗುರುಗಳ ಜಯಂತೋತ್ಸವವನ್ನು ಸರ್ಕಾರವೇ ಮಾಡಬೇಕೆಂದು ಮನವಿ ಮಾಡಿದ್ದರು. ನಾನು ಅಂದು ಆಶ್ವಾಸನೆ ಕೊಟ್ಟಿದ್ದೆ. ಅದರಂತೆ ಸರ್ಕಾರವೇ ನಡೆಸುತ್ತಿದೆ. ಕೋಟಿ ಚನ್ನಯ್ಯ ಥೀಮ್ ಪಾರ್ಕ್ ಗೆ 5 ಕೋಟಿ ನೀಡಿದ್ದೆ. ಅಧ್ಯಯನ ಪೀಠ ಒಂದು ಮಾಡುವುದಕ್ಕೆ ಆಗಿಲ್ಲ. ಅದರ ಕಡೆಗೂ ಗಮನ ಹರಿಸುತ್ತೇವೆ.
ನಾರಾಯಣ ಗುರುಗಳು ಜಾತಿ ಬಗ್ಗೆ ಹೇಳಿದ್ದರು. ನಮ್ಮ ಸ್ವಾರ್ಥಕ್ಕಾಗಿ ಜಾತಿ ಮಾಡಿಕೊಂಡಿದ್ದೇವೆ. ಜಾತಿ ಬಗ್ಗೆ ಹೇಳಬೇಡ, ಕೇಳ ಬೇಡ, ಮಾಡಬೇಡ ಎಂದಿದ್ದರು ಎಂದು ನಾರಾಯಣ ಗುರುಗಳ ಮಾತನ್ನು ನೆನೆದಿದ್ದಾರೆ.