ಬೆಂಗಳೂರು : ಇಂದು ಈಡಿಗ ಸಮುದಾಯದ ಸಮಾವೇಶ ನಡೆಯುತ್ತಿದೆ. ಈ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮಧು ಬಂಗಾರಪ್ಪ ಸೇರಿದಂತೆ ಹಲವರು ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. ಇದೇ ಸಮಾವೇಶದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಶಿವಣ್ಣನಿಗೆ ಒಂದು ಆಫರ್ ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಡಿಕೆ ಶಿವಕುಮಾರ್ ಕೇಳಿದ್ದಾರೆ.
ಸಮಾವೇಶದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ‘ನೀನೂ ರೆಡಿಯಾಗಪ್ಪ, ಪಾರ್ಲಿಮೆಂಟ್ ನಿಂತುಕೊಳ್ಳುವುದಕ್ಕೆ, ನಿಂಗೆ ಬೇಕಾದ ಕಡೆಯಲ್ಲಿ ಟಿಕೆಟ್ ಕೊಡುತ್ತೇವೆ ಎಂದಿದ್ದೆ. ಇಲ್ಲ ಒಂದು ಐದು ಸಿನಿಮಾಗಳನ್ನು ಒಪ್ಪಿಕೊಂಡು ಬಿಟ್ಟಿದ್ದೀನಿ ಅಂದ್ರು. ನಾನು ಹೇಳಿದೆ ಸಿನಿಮಾಗಳು ಯಾವಾಗ ಬೇಕಾದರೂ ಮಾಡಬಹುದು. ಸಂಸತ್ ಗೆ ಹೋಗಲು ಯಾರಿಗೂ ಯೋಗ ಬರುವುದಿಲ್ಲ. ಆ ಯೋಗ ಮನೆ ಬಾಗಿಲಿಗೆ ಬಂದಿದೆ. ಅದನ್ನು ತಪ್ಪಿಸಿಕೊಳ್ಳುವುದಕ್ಕೆ ಹೋಗಬೇಡಿ ಎಂದೆ. ನಮ್ಮ ಸರ್ಕಾರ ನಿಮ್ಮ ಬೆನ್ನಿಗೆ ಇದೆ. ನಿಮ್ಮ ಸಹಾಯ ಪಕ್ಷಕ್ಕೆ ಇರಬೇಕು ಎಂದಿದ್ದಾರೆ’ ಎಂದಿದ್ದಾರೆ.
ಶಿವಣ್ಣ ರಾಜಕೀಯದಲ್ಲಿ ನೇರವಾಗಿ ನಿಲ್ಲದೆ ಇದ್ದರು, ಪತ್ನಿ ಹಾಗೂ ಭಾಮೈದನ ಪರವಾಗಿ ಸಾಕಷ್ಟು ಪ್ರಚಾರ ನಡೆಸಿದ್ದಾರೆ. ಗೀತಾ ಸ್ಪರ್ಧೆ ಮಾಡಿದ್ದಾಗಲೂ ಅವರ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಮಧು ಬಂಗಾರಪ್ಪ ಅವರ ಪರವಾಗಿಯೂ ಪ್ರಚಾರದಲ್ಲಿ ತೊಡಗಿದ್ದರು. ಇದೀಗ ನೇರವಾಗಿ ಶಿವಣ್ಣ ಅವರಿಗೇನೆ ಆಫರ್ ನೀಡಲಾಗಿದೆ. ಸಿನಿಮಾಗಳಲ್ಲಿ ಬ್ಯುಸಿ ಇರುವ ಶಿವಣ್ಣ, ರಾಜಕೀಯಕ್ಕೆ ಬರುತ್ತಾರಾ ಎಂಬ ಕುತೂಹಲ ಸಹಜವಾಗಿಯೇ ಎಲ್ಲರಲ್ಲೂ ಕಾಡುತ್ತಿದೆ. ಆಫರ್ ಗಳು ಇದೇ ಮೊದಲೇನು ಅಲ್ಲದೆ ಹೋದರು ಶಿವಣ್ಣ ಈ ಬಾರಿ ಯಾವ ನಿರ್ಧಾರ ಮಾಡ್ತಾರೆ ಎಂಬ ಪ್ರಶ್ನೆ ಇದೆ.