Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಟಿ.ನುಲೇನೂರು ಶಂಕರಪ್ಪನವರ ಹೋರಾಟದ ದಾರಿ ರೈತ ವರ್ಗಕ್ಕೆ ಮಾರ್ಗದರ್ಶನ : ಶಾಸಕ ದರ್ಶನ್ ಪುಟ್ಟಣ್ಣಯ್ಯ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.09 : ರೈತರು, ದಲಿತರು, ಕಾರ್ಮಿಕರ ಹಕ್ಕುಗಳನ್ನು ಆಳುವ ಸರ್ಕಾರಗಳು ದಮನ ಮಾಡುತ್ತಿರುವುದರಿಂದ ರೈತರೆಲ್ಲಾ ಒಂದಾಗಿ ಚಳುವಳಿಯನ್ನು ಮಾಡಬೇಕಿದೆ ಎಂದು ಕಿಸಾನ್‍ಸಭಾ ರಾಜ್ಯಾಧ್ಯಕ್ಷ ಸಿದ್ದನಗೌಡ ಪಾಟೀಲ್ ಕರೆ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಜಿಲ್ಲಾ ನೀರಾವರಿ ಅನುಷ್ಟಾನ ಹೋರಾಟ ಸಮಿತಿ ವತಿಯಿಂದ ತ.ರಾ.ಸು.ರಂಗಮಂದಿರದಲ್ಲಿ ಶನಿವಾರ ನಡೆದ ಹೋರಾಟಗಾರ ಟಿ.ನುಲೇನೂರು ಎಂ.ಶಂಕರಪ್ಪನವರ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ರೈತರ ಸಮಸ್ಯೆಗಳ ಕುರಿತು ಸದಾ ಚಿಂತಿಸುತ್ತಿದ್ದ ಟಿ.ನುಲೇನೂರು ಶಂಕರಪ್ಪನವರಲ್ಲಿ ಬದ್ದತೆಯಿತ್ತು. ರೈತ ಸಂಘಗಳೆಲ್ಲಾ ಒಂದಾಗಬೇಕೆಂಬ ಕನಸು ಅವರದಾಗಿತ್ತು. ಬದುಕಿದ ರೀತಿ, ಚಿಂತನೆ, ಆಶಯಗಳನ್ನು ಈಗಿನ ರೈತ ಹೋರಾಟಗಾರರು ಮುಂದುವರೆಸಿಕೊಂಡು ಹೋಗಬೇಕಿದೆ. ಕೇಂದ್ರ ಸರ್ಕಾರ ರೈತ ವಿರೋಧಿ ಕರಾಳ ಕಾಯಿದೆಯನ್ನು ಜಾರಿಗೆ ತಂದಾಗ ದೆಹಲಿಯಲ್ಲಿ ಒಂದು ವರ್ಷಗಳ ಕಾಲ ನಡೆದ ಚಳುವಳಿಯಲ್ಲಿ ಏಳು ನೂರರಿಂದ ಎಂಟು ನೂರು ರೈತರು ಪ್ರಾಣ ಕೊಟ್ಟರು. ಶಂಕರಣ್ಣನವರ ಆಸೆ ಈಡೇರಬೇಕಾದರೆ ಮಧ್ಯಕರ್ನಾಟಕದ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯ ರೈತರೆಲ್ಲಾ ಒಂದಾಗಿ ರಾಜಕೀಯ ಶಕ್ತಿ ಬೆಳೆಸಿಕೊಳ್ಳುವ ಅನಿವಾರ್ಯತೆಯಿದೆ.

ಪ್ರಧಾನಿ ನರೇಂದ್ರ ಮೋದಿ ದೇಶದ ಕೃಷಿಯನ್ನು ಕಾರ್ಪೊರೇಟ್ ಕಂಪನಿಗಳಿಗೆ ಕೊಡುವ ಕೆಲಸ ಮಾಡುತ್ತಿದ್ದಾರೆ. ಇನ್ನಾದರೂ ರೈತರು ಜಾಗೃತರಾಗಿ ದೇಶಾದ್ಯಂತ ಗಟ್ಟಿ ಚಳುವಳಿ ಕಟ್ಟಬೇಕಿದೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ ಯಾವುದೇ ಒಬ್ಬ ವ್ಯಕ್ತಿ ಬದುಕಿದ್ದಾಗ ಮಹತ್ವ ಗೊತ್ತಾಗಲ್ಲ. ರೈತ ಹೋರಾಟಗಾರ ಟಿ.ನುಲೇನೂರು ಶಂಕರಪ್ಪನವರು ಈಗ ನಮ್ಮನ್ನೆಲ್ಲಾ ಅಗಲಿರುವುದರಿಂದ ಅವರಲ್ಲಿದ್ದ ಆಚಾರ, ವಿಚಾರ, ಬದ್ದತೆ, ಚಳುವಳಿಯ ಗಟ್ಟಿತನ, ರೈತರ ಮೇಲಿದ್ದ ಕಾಳಜಿ ಅರಿವಾಗುತ್ತಿದೆ. ರೈತ ಸಂಘಟನೆಗಳ ಒಡಕಿನ ಬಗ್ಗೆ ನನ್ನ ಜೊತೆ ಸದಾ ವ್ಯಥೆ ಪಡುತ್ತಿದ್ದರು. ರೈತ ಸಂಘವನ್ನು ಒಂದುಗೂಡಿಸುವ ಹುಮ್ಮಸ್ಸಿತ್ತು. ಕೆಲವರು ಬದುಕಿದ್ದು, ಸತ್ತಂತಿರುತ್ತಾರೆ. ಆದರೆ ಟಿ.ನುಲೇನೂರು ಶಂಕರಪ್ಪನವರು ಸತ್ತ ಮೇಲೆ ಬದುಕಿದ್ದಾರೆ. ಅಂತಹ ವ್ಯಕ್ತಿತ್ವ ಅವರದು ಎಂದು ಕಂಬನಿ ಮಿಡಿದರು.

ನುಡಿನಮನ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೋರಾಟದ ರುವಾರಿಯಾಗಿದ್ದ ರೈತ ಟಿ.ನುಲೇನೂರು ಶಂಕರಪ್ಪನವರ ಹೋರಾಟದ ದಾರಿ ರೈತ ವರ್ಗಕ್ಕೆ ಮಾರ್ಗದರ್ಶನವಾಗಿರಲಿ. ಅವರು ಜೀವಂತವಾಗಿದ್ದಾಗ ಅನೇಕ ಸಾರಿ ನನ್ನ ಜೊತೆ ಮಾತನಾಡಿದ್ದಾರೆ. ಮಧ್ಯಕರ್ನಾಟಕದ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಗೆ ಭದ್ರಾಮೇಲ್ದಂಡೆ ಯೋಜನೆಗಾಗಿ ನಡೆದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಂಕರಣ್ಣನವರ ಆಸೆ ಈಡೇರಬೇಕಾಗಿರುವುದರಿಂದ ಅವರ ಚಳುವಳಿಯನ್ನು ರೈತರು ಮುಂದುವರೆಸಿಕೊಂಡು ಹೋಗಬೇಕಿದೆ ಎಂದು ಹಾರೈಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಮತ್ತೊಬ್ಬ ಅಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಮಾತನಾಡುತ್ತ ರೈತ ಹೋರಾಟದಲ್ಲಿ ಬದ್ದತೆ ಮೈಗೂಡಿಸಿಕೊಂಡಿದ್ದ ಟಿ.ನುಲೇನೂರು ಶಂಕರಪ್ಪನವರು ಭದ್ರಾಮೇಲ್ದಂಡೆ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಒಬ್ಬೊಬ್ಬರೆ ಹೋರಾಟಗಾರರನ್ನು ಕಳೆದುಕೊಳ್ಳುತ್ತಿರುವುದು ನಿಜಕ್ಕೂ ರೈತರಿಗೆ ಆಗುತ್ತಿರುವ ಬಹುದೊಡ್ಡ ನಷ್ಠ. ಚಿತ್ರದುರ್ಗ ಜಿಲ್ಲೆಗೆ ನೀರು ಕೊಡುವುದರ ಬಗ್ಗೆ ನಮ್ಮ ವಿರೋಧವಿಲ್ಲ. ರೈತರೆಂದರೆ ಒಂದು ಕುಟುಂಬದವರು ಎನ್ನುವ ಭಾವನೆಯಿರಬೇಕು ಎಂದು ಹೇಳಿದರು.

ಸರ್ಕಾರದ ಕಣ್ಣು ತೆರೆಸುವ ಚಳುವಳಿಗಳಾಗಬೇಕು. ರೈತರು ಕಾರ್ಮಿಕರ ಸಮಸ್ಯೆಗಳು ಇನ್ನು ಜೀವಂತವಾಗಿದೆ. ಜಾತಿ ಧರ್ಮದ ಹಿನ್ನೆಲೆಯಲ್ಲಿ ರೈತರನ್ನು ಹೊಡೆದು ಆಳುತ್ತಿರುವ ಸರ್ಕಾರದ ವಿರುದ್ದ ಮೆಟ್ಟಿನಿಲ್ಲುವ ಶಕ್ತಿ ರೈತರಲ್ಲಿ ಬೆಳೆಯಬೇಕು. ಎ.ಪಿ.ಎಂ.ಸಿ. ಭೂಸುಧಾರಣಾ ಕಾಯಿದೆ, ಜಾನುವಾರು ಹತ್ಯಾ ಕಾಯಿದೆಯನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿದರು.

ನುಡಿ ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ನೀರಾವರಿ ಅನುಷ್ಟಾನ ಸಮಿತಿಯ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಮಾತನಾಡಿ ಟಿ.ನುಲೇನೂರು ಶಂಕರಪ್ಪ ಎಲ್ಲರೊಡನೆ ಒಡನಾಡಿಯಾಗಿದ್ದರು. ಅವರ ಅಕಾಲಿಕ ನಿಧನ ಎಲ್ಲರಿಗೂ ನೋವಾಗಿದೆ. ಚಿತ್ರದುರ್ಗ ಜಿಲ್ಲೆಗೆ ಭದ್ರಾಮೇಲ್ದಂಡೆ ಯೋಜನೆ ಹೋರಾಟದಲ್ಲಿ ಪ್ರಮುಖರಾಗಿದ್ದರು. ಮಳೆ ಬೆಳೆಯಿಲ್ಲದೆ ಸಂಕಷ್ಠದಲ್ಲಿರುವ ಜಿಲ್ಲೆಯ ರೈತರ ಬದುಕು ಹಸನಾಗಬೇಕಾದರೆ ಶಂಕರಣ್ಣನವರ ಆಸೆ ಈಡೇರಬೇಕು ಎಂದು ಹೇಳಿದರು.

ಭದ್ರಾ ಮೇಲ್ದಂಡೆಯ ನಿವೃತ್ತ ಮುಖ್ಯ ಇಂಜಿನಿಯರ್ ಆರ್.ಚೆಲುವರಾಜ್ ಮಾತನಾಡುತ್ತ ನೇರ ನಡೆ ನುಡಿ ಸರಳ ಸಜ್ಜನಿಕೆಯ ಹೋರಾಟಗಾರರಾಗಿದ್ದ ಟಿ.ನುಲೇನೂರು ಶಂಕರಪ್ಪ ಜಿಲ್ಲೆಯ ರೈತರ ಸಮಸ್ಯೆಗಳ ಕುರಿತು ನನ್ನೊಂದಿಗೆ ಸದಾ ಚರ್ಚಿಸುತ್ತಿದ್ದರು. ಜಿಲ್ಲೆಗೆ ನೀರಾವರಿ ಯೋಜನೆ ಜಾರಿಗೆ ತರಲು ಇರುವ ಅಡ್ಡಿ ಆತಂಕಗಳ ಬಗ್ಗೆಯೂ ಸಮಾಲೋಚಿಸಿದ್ದರು. ಜಿಲ್ಲೆಗೆ ಭದ್ರಾಮೇಲ್ದಂಡೆ ಯೋಜನೆ ಜಾರಿಗೆ ತರಬೇಕೆಂಬುದು ಅವರ ಕನಸಾಗಿತ್ತು ಎಂದು ನೆನಪಿಸಿಕೊಂಡರು.

ಪ್ರಗತಪರ ಚಿಂತಕ ಜೆ.ಯಾದವರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ ಚಿತ್ರದುರ್ಗ ಜಿಲ್ಲೆ ಜನಪರ ಹೋರಾಟಗಾರರನ್ನು ಕಳಚಿಕೊಳ್ಳುತ್ತಿದೆ. ಸ್ನೇಹಮಯಿಯಾಗಿದ್ದ ಟಿ.ನುಲೇನೂರು ಶಂಕರಪ್ಪನವರು ರೈತ ಹೋರಾಟಕ್ಕೆ ತನ್ನದೆ ಆದ ಕೊಡುಗೆ ನೀಡಿದ್ದಾರೆ. ಅವರನ್ನು ಸ್ಮರಣೆ ಮಾಡಿಕೊಳ್ಳಲೇಬೇಕು. ಸಂಘಟನೆಯ ಸಾರಥಿಗೆ ಶಂಕರಣ್ಣನವರು ಮಾದರಿಯಾಗಿದ್ದರು.

ಜನಪರ ರೈತಪರ ಕಾಳಜಿಯಿತ್ತು. ಕೈ-ಬಾಯಿಯನ್ನು ಶುದ್ದವಾಗಿಟ್ಟುಕೊಂಡಿದ್ದರು. ಭ್ರಷ್ಟಾಚಾರದ ಕಳಂಕವನ್ನು ಅಂಟಿಸಿಕೊಳ್ಳಲಿಲ್ಲ. ರೈತ ಸಂಘಕ್ಕೆ ಎಲ್ಲಿಯೂ ಕಪ್ಪು ಚುಕ್ಕೆ ತರಲಿಲ್ಲ. ಸಿದ್ದಾಂತವನ್ನು ಬಿಡದೆ ಪ್ರಾಮಾಣಿಕವಾಗಿ ಬದುಕಿದವರು ಎಂದು ಸ್ಮರಿಸಿದರು.

ಟಿ.ನುಲೇನೂರು ಶಂಕರಪ್ಪನವರ ಧರ್ಮಪತ್ನಿ ಶ್ರೀಮತಿ ಕಮಲಮ್ಮ ವೇದಿಕೆಯಲ್ಲಿದ್ದರು.
ಹಿರಿಯ ಪತ್ರಕರ್ತರ ಚಿಕ್ಕಪ್ಪನಹಳ್ಳಿ ಷಣ್ಮುಖ ಕಾರ್ಯಕ್ರಮ ನಿರೂಪಿಸಿದರು. ಮತ್ತೊಬ್ಬ ಹಿರಿಯ ಪತ್ರಕರ್ತ ಅಹೋಬಲಪತಿ ಎಲ್ಲರನ್ನು ಸ್ವಾಗತಿಸಿದರು.

ನೂರಾರು ರೈತರು, ಕಾರ್ಮಿಕ ಮುಖಂಡರು, ಶಂಕರಪ್ಪನವರ ಅಭಿಮಾನಿಗಳು, ಕುಟುಂಬದವರು ನುಡಿ ನಮನದಲ್ಲಿ ಪಾಲ್ಗೊಂಡಿದ್ದರು.

ಡಿ.ಓ.ಮುರಾರ್ಜಿ ರೈತ ಗೀತೆ ಹಾಡಿದರು. ಟಿ.ನುಲೇನೂರು ಶಂಕರಪ್ಪ ಹಾಗೂ ಹಿರಿಯ ನಟಿ ಲೀಲಾವತಿ ನಿಧನಕ್ಕೆ ಒಂದು ನಿಮಿಷಗಳ ಮೌನ ಆಚರಿಸಲಾಯಿತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!