ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.08 :
ಅವೈಜ್ಞಾನಿಕ ಮರಣ ಶಾಸನವಾಗಿರುವ ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರಬಾರದೆಂದು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿಕೆ ನೀಡಿರುವುದನ್ನು ಹಿಂದಕ್ಕೆ ಪಡೆಯಬೇಕು.
ಇಲ್ಲವಾದಲ್ಲಿ ಮಾದಿಗ ಮಹಾಸಭಾದಿಂದ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ಮಾದಿಗ ಮಹಾಸಭಾ ರಾಜ್ಯಾಧ್ಯಕ್ಷ ಹನುಮಂತಪ್ಪ ದುರ್ಗ ಎಚ್ಚರಿಸಿದರು.
ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸದಾಶಿವ ಆಯೋಗದ ವರದಿ ಜಾರಿಗಾಗಿ ಕಳೆದ 25 ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಪ್ರತಿ ಸಾರಿ ನಡೆಯುವ ವಿಧಾನಸಭೆ ಅಧಿವೇಶನದ ಸಮಯದಲ್ಲಿ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಗಳು ಇಂತಹ ಹೇಳಿಕೆಗಳನ್ನು ನೀಡುತ್ತ ಪರಿಶಿಷ್ಟ ಜಾತಿಗಳಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಪರಿಶಿಷ್ಟ ಜಾತಿಯಲ್ಲಿ ಮಾದಿಗರು, ಒಲೆಯರು ಅತ್ಯಂತ ಹಿಂದುಳಿದಿದ್ದಾರೆ. ಕೊರಚ, ಕೊರಮ, ಭೋವಿ, ಲಂಬಾಣಿ ಇವರುಗಳಿಗೂ ಮೀಸಲಾತಿ ಸಿಗುತ್ತಿಲ್ಲ. ಸದಾಶಿವ ಆಯೋಗದ ವರದಿ ಜಾರಿಗೊಳಿಸುವ ಮೂಲಕ ಮೀಸಲಾತಿಯನ್ನು ಕಲ್ಪಿಸಬೇಕು. ನಿಜವಾದ ಮಾದಿಗರು, ಒಲೆಯರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.
ರಾಜ್ಯದಲ್ಲಿದ್ದ ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುತ್ತೇವೆಂದು ಬೋಗಸ್ ಹೇಳಿಕೆ ನೀಡಿ ದಲಿತರನ್ನು ವಂಚಿಸುತ್ತಲೆ ಕಾಲ ಕಳೆಯಿತು. ಇಡೀ ದೇಶದಲ್ಲಿ ಸುಳ್ಳು ಹೇಳುವ ರಾಜಕೀಯ ಪಕ್ಷ ಯಾವುದಾದರೂ ಇದ್ದರೆ ಅದು ಬಿಜೆಪಿ ಎಂದು ಕಿಡಿಕಾರಿದರು.
ಎಸ್ಸಿ.ಗಳಿಗೆ ಅನ್ಯಾಯವಾಗುತ್ತಿದ್ದರು ಮೀಸಲಾತಿ ಕ್ಷೇತ್ರದಿಂದ ಗೆದ್ದು ಹೋಗಿರುವ ಎಸ್ಸಿ. ರಾಜಕಾರಣಿಗಳು ಯಾರು ನಮ್ಮ ಪರ ಧ್ವನಿ ಎತ್ತುತ್ತಿಲ್ಲ. ಬಿಜೆಪಿ.ಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಕೂಡಲೆ ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರದಿದ್ದರೆ ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಲಾಗುವುದೆಂದು ಹೇಳಿದರು.
ಶೋಷಿತ ಸಮಾಜದ ರಾಜ್ಯಾಧ್ಯಕ್ಷ ಬಿ.ರಾಜಣ್ಣ ಮಾತನಾಡಿ ಮೀಸಲಾತಿಯಿಂದ ಗೆದ್ದವರು ಸದಾಶಿವ ಆಯೋಗದ ವರದಿಯನ್ನು ಏಕೆ ವಿರೋಧ ಮಾಡುತ್ತಿದ್ದಾರೆ. ಬೆಳಗಿನ ಮೈಕೊರೆಯುವ ಚಳಿಯನ್ನು ಲೆಕ್ಕಿಸದೆ ಊರಿನ ಸ್ವಚ್ಚತೆಯಲ್ಲಿ ತೊಡಗುವ ದಲಿತರ ಉದ್ದಾರಕ್ಕಾಗಿ ಸದಾಶಿವ ಆಯೋಗದ ವರದಿ ಜಾರಿಗೆ ತರಲೇಬೇಕು. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಒಳಗೆ ಸದಾಶಿವ ಆಯೋಗದ ವರದಿ ಜಾರಿಯಾಗಬೇಕು. ಯಾರೂ ಅಡ್ಡಿಪಡಿಸುವ ಅಗತ್ಯವಿಲ್ಲ. ಜನಸಂಖ್ಯೆಗನುಗುಣವಾಗಿ ಮೀಸಲಾತಿ ಕೊಡಿ ನಮ್ಮದೇನು ಅಭ್ಯಂತರವಿಲ್ಲ. ಬಿಹಾರ, ಉತ್ತರಪ್ರದೇಶದಲ್ಲಿ ಹಾಡು ಹಗಲೆ ದಲಿತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿದೆ ಎಂದು ದಲಿತರು ಅನುಭವಿಸುತ್ತಿರುವ ನೋವನ್ನು ವ್ಯಕ್ತಪಡಿಸಿದರು.
ವಕೀಲ ವೆಂಕಟೇಶ್, ದೇವರಾಜ್, ವೈ.ರಾಜಣ್ಣ, ಸುರೇಶ್, ರುದ್ರಪ್ಪ, ರವಿ, ರಾಮಚಂದ್ರಪ್ಪ, ಕೆಂಚಪ್ಪ, ಗಂಗಾಧರ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.