ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.06 : ಡಾ.ಬಿ.ಆರ್.ಅಂಬೇಡ್ಕರ್ ವಿಶ್ವಮೆಚ್ಚಿದ ಶ್ರೇಷ್ಠ ಜ್ಞಾನಿ ಎಂದು ಸಮಾಜ ಕಲ್ಯಾಣ ಇಲಾಖೆ ಮಾಜಿ ಸಚಿವ ಹೆಚ್.ಆಂಜನೇಯ ಹೇಳಿದರು.
ಭೀಮಯಾತ್ರೆ ಬಳಗದ ಸದಸ್ಯರಿಂದ ಬುಧವಾರ ನಡೆದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರವರ 67 ನೇ ಪರಿನಿರ್ವಾಣ ದಿನ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ, ಸಂಘಟನೆ, ಹೋರಾಟ ಅಂಬೇಡ್ಕರ್‍ರವರ ಮೂಲ ಮಂತ್ರವಾಗಿತ್ತು. ಅಭಿವೃದ್ದಿಯ ಹರಿಕಾರ ಅಂಬೇಡ್ಕರ್‍ರವರ ಅನುಯಾಯಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಐದು ಉಚಿತ ಗ್ಯಾರೆಂಟಿಗಳನ್ನು ರಾಜ್ಯದ ಜನತೆಗೆ ಘೋಷಿಸಿದ್ದಾರೆ. ನಾನು ಸಮಾಜ ಕಲ್ಯಾಣ ಮಂತ್ರಿಯಾಗಿದ್ದಾಗ ಹೆಣ್ಣು ಮಕ್ಕಳಿಗೆ ಅನೇಕ ಹಾಸ್ಟೆಲ್‍ಗಳನ್ನು ತೆರೆದು ಶಿಕ್ಷಣಕ್ಕೆ ಅನುಕೂಲ ಮಾಡಿಕೊಟ್ಟಿದ್ದೇನೆ. ಎಲ್ಲವನ್ನು ಬಳಸಿಕೊಂಡು ಶಿಕ್ಷಣವಂತರಾಗುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಗಾಂಧಿ, ನೆಹರು ಇವರುಗಳು ಡಾ.ಬಿ.ಆರ್.ಅಂಬೇಡ್ಕರ್‍ಗೆ ಸಂವಿಧಾನ ಬರೆಯುವ ಅಕವಾಶ ಕೊಟ್ಟರು. ಅನೇಕ ರಾಷ್ಟ್ರಗಳ ಸಂವಿಧಾನ ಓದಿಕೊಂಡು ಭಾರತಕ್ಕೆ ಭದ್ರವಾದ ಸಂವಿಧಾನ ರಚಿಸಿ ಕೊಡುಗೆಯಾಗಿ ನೀಡಿದ್ದಾರೆ. ಮಹಿಳೆಯರಿಗೆ ಮೀಸಲಾತಿಗಾಗಿ ಹಿಂದೂ ಕೋಡ್ ಬಿಲ್ ಜಾರಿಗೆ ತಂದಾಗ ಪಾರ್ಲಿಮೆಂಟ್‍ನಲ್ಲಿ ಅದು ಪಾಸ್ ಆಗಲಿಲ್ಲ. ಆಗ ಬೇಸರಗೊಂಡು ಕೇಂದ್ರ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿ ಹೊರಬಂದರು ಎನ್ನುವುದನ್ನು ಸ್ಮರಿಸಿದರು.
ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ ದೇಶಕ್ಕೆ ಸಂವಿಧಾನವನ್ನು ಕೊಡುಗೆಯಾಗಿ ನೀಡಿರುವ ಡಾ.ಬಿ.ಆರ್.ಅಂಬೇಡ್ಕರ್‍ರವರ ಆಚಾರ ವಿಚಾರ ತತ್ವ ಸಿದ್ದಾಂತಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಪಾಲಿಸಿದರೆ ಅದುವೆ ಅವರಿಗೆ ಸಲ್ಲುವ ನಿಜವಾದ ಗೌರವ ಎಂದು ಹೇಳಿದರು.
ಜಿಲ್ಲಾಧಿಕಾರಿ ಶ್ರೀಮತಿ ದಿವ್ಯಪ್ರಭು ಜಿ.ಆರ್.ಜೆ. ಮಾತನಾಡುತ್ತ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಶೋಷಿತರ ವಿರುದ್ದ ನಡೆದ ಅನ್ಯಾಯದ ವಿರುದ್ದ ಹೋರಾಡಿದ ಡಾ.ಬಿ.ಆರ್.ಅಂಬೇಡ್ಕರ್ ಶಿಕ್ಷಣವನ್ನೇ ಅಸ್ತ್ರವನ್ನಾಗಿ ನೀಡಿದರು.
ನುಡಿದಂತೆ ನಡೆದು ಬದುಕಿದವರು. ಶಿಕ್ಷಣ, ಸಂಘಟನೆ, ಹೋರಾಟ ಬದುಕಿಗೆ ಬುನಾದಿ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ವಿಶ್ವಜ್ಞಾನಿಯಾಗಿ, ಸಂವಿಧಾನಶಿಲ್ಪಿಯಾಗಿ ಇಂದಿಗೂ ಎಲ್ಲರ ಮನದಲ್ಲಿ ಉಳಿದಿದ್ದಾರೆಂದರು.
ಭೀಮಯಾತ್ರೆ ಬಳಗದ ಅಧ್ಯಕ್ಷ ನ್ಯಾಯವಾದಿ ಎಸ್.ರವೀಂದ್ರ, ಸದಸ್ಯರುಗಳಾದ ನ್ಯಾಯವಾದಿ ಜಿ.ಎಸ್.ಶರಣಪ್ಪ, ಕುಮಾರಸ್ವಾಮಿ, ಸತೀಶ ಟಿ, ಮಂಜುನಾಥ ಎಸ್. ಕೃಷ್ಣಮೂರ್ತಿ, ರಘು, ನಟರಾಜ್, ರಾಘವೇಂದ್ರ, ಸಂತೋಷ್, ಅಭಿ, ಕುಮಾರಸ್ವಾಮಿ, ಅನಿಲ್‍ಕೋಟಿ, ಪ್ರೇಮನಾಥ್, ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ನಗರಸಭೆ ಪೌರಾಯುಕ್ತರಾದ ರೇಣುಕ ಸೇರಿದಂತೆ ವಿವಿಧ ಹಾಸ್ಟೆಲ್‍ಗಳ ಸಹಸ್ರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪರಿನಿರ್ವಾಣ ದಿನದಲ್ಲಿ ಭಾಗವಹಿಸಿದ್ದರು.
ಅಂಬೇಡ್ಕರ್ ಪ್ರತಿಮೆಯನ್ನು ಬಣ್ಣ ಬಣ್ಣದ ಹೂವು, ಹಾರ, ಸೀರಿಯಲ್ ಲೈಟ್‍ಗಳಿಂದ ಕಲರ್‍ಫುಲ್ ಆಗಿ ಅಲಂಕರಿಸಲಾಗಿತ್ತು.