ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.02 : ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಚಿತ್ರದುರ್ಗ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಸಂಪೂರ್ಣ ಹಣ ಬಿಡುಗಡೆಗೊಳಿಸುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಕರುನಾಡ ವಿಜಯಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಇದುವರೆವಿಗೂ ಚಿತ್ರದುರ್ಗದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಭೂಮಿಪೂಜೆ ನೆರವೇರಿಸಿರುವುದಿಲ್ಲ. ಐದು ನೂರು ಕೋಟಿ ರೂ.ಗಳ ಬಜೆಟ್‍ನಲ್ಲಿ ಕೇವಲ 30 ಕೋಟಿ ರೂ.ಗಳನ್ನು ಮಾತ್ರ ಸರ್ಕಾರ ಬಿಡುಗಡೆಗೊಳಿಸಿದೆ. ಚಿತ್ರದುರ್ಗದಲ್ಲಿ ಅವೈಜ್ಞಾನಿಕವಾಗಿ ರಸ್ತೆಗಳ ನಿರ್ಮಾಣವಾಗಿದ್ದು, ಎಲ್ಲಿಯೂ ಜನಸಾಮಾನ್ಯರ ಓಡಾಟಕ್ಕೆ ಫುಟ್‍ಪಾತ್‍ಗಳಿಲ್ಲ.
ರಾಜಕಾಲುವೆ ಒತ್ತುವರಿಯಾಗಿರುವುದನ್ನು ತೆರವುಗೊಳಿಸಬೇಕು. ಸೇವೆ ಖಾಯಂಗಾಗಿ ಕಳೆದ ಹತ್ತು ದಿನಗಳಿಂದಲೂ ಅನಿರ್ಧಿಷ್ಠಾವಧಿ ಧರಣಿ ನಡೆಸುತ್ತಿರುವ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರುಗಳ ಸೇವೆಯನ್ನು ಖಾಯಂಗೊಳಿಸಬೇಕು.
ರಾಜ-ಮಹಾರಾಜರು ಆಳಿದ ಐತಿಹಾಸಿಕ ಚಿತ್ರದುರ್ಗದಲ್ಲಿ ದುರ್ಗೋತ್ಸವ ನಡೆಯಬೇಕೆಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಒತ್ತಾಯಿಸಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಗೌರಣ್ಣ, ಗೋಪಿನಾಥ್, ಜಗದೀಶ್ ಸಿ. ರತ್ನಮ್ಮ, ಸುರೇಶ, ಅಖಿಲೇಶ್, ಮಹಮದ್ ರಫಿ, ಶಾನ್, ಅವಿನಾಶ್, ಕಮಲಮ್ಮ ಇನ್ನು ಅನೇಕರು ಪ್ರತಿಭಟಣೆಯಲ್ಲಿ ಪಾಲ್ಗೊಂಡಿದ್ದರು.