ವರದಿ ಮತ್ತು ಫೋಟೋ ಕೃಪೆ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಸುದ್ದಿಒನ್, ಚಿತ್ರದುರ್ಗ. ಡಿ.02: ಶಿಕ್ಷಕರು ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿ ಹೊಸತನವನ್ನು ತಿಳಿದುಕೊಳ್ಳಬೇಕು. ಈ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿ, ಅವರು ಸಹ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೆಪಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್ ರೆಡ್ಡಿ ಹೇಳಿದರು.
ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ಶಿಕ್ಷಕರ ಕಲ್ಯಾಣ ನಿಧಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಾರ್ಯಾಲಯ ವತಿಯಿಂದ ಆಯೋಜಿಸಿದ್ದ 2023-24ನೇ ಸಾಲಿನ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಹ-ಪಠ್ಯ ಚಟುವಟಿಕೆಗಳ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾಗಿ ರಾಜ್ಯ, ರಾಷ್ಟç ಮಟ್ಟದಲ್ಲಿ ಭಾಗವಹಿಸಬೇಕು. ಇದು ಸ್ಪರ್ಧಾ ಯುಗ ಆಗಿರುವುದ್ದರಿಂದ ಸದಾ ಕಾಲ ಶಿಕ್ಷಕರು ಹೊಸತನ ಹಾಗೂ ಹೊಸ ವಿಚಾರಗಳನ್ನು ಕಲಿತು, ರೂಢಿಸಿಕೊಳ್ಳಲು ಆದ್ಯತೆ ನೀಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗುಣಾತ್ಮಕ ಶಿಕ್ಷಣದ ಜೊತೆಗೆ ಮಕ್ಕಳಿಗೆ ಬದುಕಿನ ಕೌಶಲ್ಯಗಳನ್ನು ಕಲಿಸಬೇಕು.ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಪ್ರೇರಣೆ ನೀಡಬೇಕು. ಶಿಕ್ಷಕರು ಧನಾತ್ಮಕ ಚಿಂತನೆ ಬೆಳಸಿಕೊಳ್ಳಬೇಕು ಎಂದು ಹೇಳಿದರು.
ಕ್ಷೇತ್ರಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಮಾತನಾಡಿ, ಶಿಕ್ಷಕರು 365 ದಿನಗಳ ಕಾಲ ಬೋಧನೆ, ಪಠ್ಯ ಪರೀಕ್ಷೆ, ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ತೊಡಗಿರುತ್ತಾರೆ. ವೃತ್ತಿಯ ಹೊರತಾಗಿ ಶಿಕ್ಷಕರಲ್ಲಿ ಇರುವ ಪ್ರತಿಭೆಗಳನ್ನು ಹೊರ ಹಾಕಲು ಸಹ-ಪಠ್ಯೇತರ ಸ್ಪರ್ಧಾ ಚಟುವಟಿಕೆಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರುಗಳಿಗೆ ಜನಪದಗೀತೆ, ಆಶು ಭಾಷಣ, ಪ್ರಬಂಧ, ಸ್ಥಳದಲ್ಲೇ ಪಾಠೋಪಕರಣ (ಟಿಎಲ್‌ಎಂ) ತಯಾರಿಕೆ, ಸ್ಥಳದಲ್ಲೇ ಚಿತ್ರ ಬರೆಯುವ, ರಸಪ್ರಶ್ನೆ (ಸಮಾನ್ಯ ಜ್ಞಾನ), ರಸಪ್ರಶ್ನೆ(ವಿಜ್ಞಾನ) ಸ್ಪರ್ಧೆ ಚಟುವಟಿಗಳು ನಡೆದವು.
ಈ ಸಂಧರ್ಭದಲ್ಲಿ ಸಮಗ್ರ ಶಿಕ್ಷಣ ಅಧಿಕಾರಿ ಸಿ.ಎಸ್.ವೆಂಕಟೇಶ್, ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿ ಎನ್.ಆರ್.ತಿಪ್ಪೇಸ್ವಾಮಿ, ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಣ್ಣ, ವಿಜ್ಞಾನ ವಿಷಯದ ಪರಿವೀಕ್ಷಕ ಗೋವಿಂದಪ್ಪ, ಆಂಗ್ಲ ಹಾಗೂ ಸಮಾಜ ವಿಜ್ಞಾನ ವಿಷಯದ ಪರಿವೀಕ್ಷಕ ಚಂದ್ರಣ್ಣ, ಕನ್ನಡ ವಿಷಯದ ಪರಿವೀಕ್ಷಕ ಶಿವಣ್ಣ ಸೇರಿದಂತೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು, ಕಾಲೇಜಿನ ಸಿಬ್ಬಂದಿಗಳು ಇದ್ದರು.