ಸುದ್ದಿಒನ್, ಹಿರಿಯೂರು, ಡಿಸೆಂಬರ್.01 :ಅಕ್ರಮವಾಗಿ ಲಾರಿಯಲ್ಲಿ ಸಾಗಿಸುತ್ತಿದ್ದ 23 ಜಾನುವಾರುಗಳನ್ನು ದಾಳಿ ನಡೆಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ರಕ್ಷಣೆ ಮಾಡಿದ ಘಟನೆ ತಾಲೂಕಿನ ಗುಯಿಲಾಳು ಟೋಲ್ ಬಳಿ ಶುಕ್ರವಾರ ನಡೆದಿದೆ.
ಇಂದು ಬೆಳಗಿನ ಜಾವ 3:00 ಸಮಯದಲ್ಲಿ
ಖಚಿತ ಮಾಹಿತಿ ಮೇರೆಗೆ ಹಿಂದೂ ಕಾರ್ಯಕರ್ತರು ದಾವಣಗೆರೆ ಕಡೆಯಿಂದ ಹಿರಿಯೂರು ಮಾರ್ಗವಾಗಿ ಕೇರಳ ಕಡೆಗೆ ಕ್ಯಾಂಟರ್ ಲಾರಿಯಲ್ಲಿ 23 ಜಾನುವಾರುಗಳನ್ನು ಸಾಗಿಸುತ್ತಿದ್ದ ವೇಳೆ ಪೊಲೀಸರ ಸಹಕಾರದಿಂದ ದಾಳಿ ನಡೆಸಿದ್ದಾರೆ.
ದಾಳಿ ಸಂದರ್ಭದಲ್ಲಿ 14 ಕೋಣಗಳು, 5 ಎಮ್ಮೆಗಳು ಹಾಗೂ 4 ಎತ್ತುಗಳನ್ನು ಕಸಾಯಿ ಖಾನೆಗೆ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಚಾಲಕ ಇದಾಯತ್ ಸೇರಿ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಜಾನುವಾರುಗಳನ್ನು ರಕ್ಷಣೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಹಿರಿಯೂರು ತಾಲ್ಲೂಕಿನ ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಸಹ ಕಾರ್ಯದರ್ಶಿ ಶ್ರೀನಿವಾಸ್, ಗೋ ರಕ್ಷಾ ಪ್ರಮುಖ್ ವಿಶ್ವನಾಥ್, ವಿ ಹಿಂ ಪ ತಾ ಉಪಾಧ್ಯಕ್ಷ ಚರಣ್, ಬಜರಂಗದಳ ಸಂಯೋಜಕ್ ಗೋವರ್ಧನ್ ಇದ್ದರು.