ಕಲಬುರಗಿ: ನಾನು ಸಮಾಜವಾದಿ ಹಿನ್ನೆಲೆಯಿಂದ ಬಂದಿದ್ದೇನೆ. ನನ್ನಲ್ಲಿ ಯಾವುದೇ ಅಂತರಂಗ, ಬಹಿರಂಗವಿಲ್ಲ. ನಾನು ಸಿಎಂ ಎದುರೇ ಕೆಲ ದಾಖಲೆಗಳನ್ನು ನೀಡುತ್ತೇನೆ ಎಂದು ಸಚಿವ ಕೃಷ್ಣ ಭೈರೇಗೌಡ ವಿರುದ್ಧ ಹಿರಿಯ ಶಾಸಕ ಬಿ ಆರ್ ಪಾಟೀಲ್ ಗುಡುಗಿದ್ದಾರೆ.
ಆಳಂದ ಪಟ್ಟಣದಲ್ಲಿ ಮಾತನಾಡಿದ ಬಿ ಆರ್ ಪಾಟೀಲ್, ನಾನೇನು ನ್ಯಾಯಾಂಗ ತನಿಖೆ ಆಯೋಗ ರಚನೆ ಮಾಡಿ ಎಂದಿಲ್ಲ. ಬದಲಾಗಿ ರಾಜಕೀಯವಾಗಿ ಚರ್ಚೆಯಾಗಲಿ, ನಾನು ಎದುರು ಕೆಲ ದಾಖಲೆಗಳನ್ನು ಇಡುತ್ತೇನೆ. ನಾನು ಯಾವುದೇ ರೀತಿಯಲ್ಲೂ ಅವಮಾನ ಮಾಡುವ ಹೇಳಿಕೆಯನ್ನು ನೀಡಿಲ್ಲ. ನಾನು ಅವತ್ತೂ ಸದನದಲ್ಲಿದ್ದೇ, ಗೂಬೆ ಕೂರಿಸುವ ಕೆಲಸ ಮಾಡುತ್ತೀರಾ ಅಂತ ಕೇಳಿದ್ದೆ. ಹೀಗಾಗಿ ಆರೋಪ ಹೊತ್ತು ಸದನಕ್ಕೆ ಹಾಜರಾಗಲ್ಲ ಎಂದು ಹೇಳಿದ್ದೇನೆ.
ಪ್ರಿಯಾಂಕ್ ಖರ್ಗೆ ಅವರು ಸಚಿವರಾದ ಮೇಲೆ ನನ್ನ ಕ್ಷೇತ್ರಕ್ಕೆ 10 ಯಾತ್ರಿ ನಿವಾಸ ನೀಡಿದ್ದರು. ಆದರೆ ಅದರಲ್ಲಿ ಒಂದೇ ಒಂದು ಮಾತ್ರ ಪೂರ್ಣಗೊಂಡಿದೆ. ಆ ಬಗ್ಗೆ ಪ್ರಗತಿ ಪರಿಶೀಲನ ಸಭೆ ಕೂಡ ನಡೆದಿಲ್ಲ. ಇನ್ನು ಕೆಲವು ಕಡೆ ಕಳಪೆ ಕೂಡ ಆಗಿದೆ. ಕಳಪೆ ಕಾಮಗಾರಿಯ ಬಗ್ಗೆ ಸ್ವತಃ ಸಚಿವರೇ ಒಪ್ಪಿಕೊಂಡಿದ್ದಲ್ಲ. ಭೂ ಸೇನಾ ನಿಗಮದಲ್ಲಿ ಕೆಲ ನ್ಯೂನ್ಯತೆ ಇದೆ ಎಂದು ಹೇಳಿದ್ದರು. ತಪ್ಪು ಒಪ್ಪಿದ ಮೇಲೆ ಒಬ್ಬ ಮಂತ್ರಿಯಾಗಿ ಅದನ್ನು ಸರಿ ಮಾಡಬೇಕಿತ್ತು. ಈಗ ನನ್ನ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಾರೆ. ಇದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಸಿಎಂ ಬಳಿ ಎಲ್ಲಾ ದಾಖಲೆಗಳನ್ನು ಇಡುತ್ತೀನು ಎಂದು ಸವಾಲು ಹಾಕಿದ್ದಾರೆ.