ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ನ. 29 : ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ಜಿಪಂ ಅಧೀನಕ್ಕೆ ಒಳಪಡಿಸಿರುವ ರಾಜ್ಯ ಸರ್ಕಾರದ ಆದೇಶ ಹಿಂಪಂಡೆಯುವಂತೆ ಒತ್ತಾಯಿಸಿ ನವೆಂಬರ್ 23 ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿಸಿದ್ದರೂ ಸರ್ಕಾರ ಮಾತ್ರ ಈವರೆಗೂ ಯಾವುದೇ ಸಕಾರಾತ್ಮಕ ನಿಲುವು ಪ್ರಕಟಿಸಿಲ್ಲ.
ಹೀಗಾಗಿ ಮತ್ತೊಮ್ಮೆ ಸರ್ಕಾರದ ಗಮನ ಸೆಳೆಯಲು ಇದೇ ಡಿಸೆಂಬರ್ ಒಂದನೇ ತಾರೀಖು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ, ಉಪನ್ಯಾಸಕರ ಹಾಗೂ ಬೋಧಕೇತರ ಒಕ್ಕೂಟ ಕರೆ ನೀಡಿದೆ.
ಬಾಲಕರ ಸರ್ಕಾರಿ ಪಪೂ ಕಾಲೇಜಿನಲ್ಲಿ ಬುಧವಾರ ನಡೆದ ಮೂರು ಸಂಘಗಳ ಅಧ್ಯಕ್ಷರು,ಪದಾಧಿಕಾರಿಗಳು ಹಾಗೂ ಸದಸ್ಯರ ಸಭೆಯಲ್ಲಿ ಮಾತಾನಾಡಿದ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಬಿ.ಆರ್.ಮಲ್ಲೇಶ್ ಚಿತ್ರದುರ್ಗ ಜಿಲ್ಲೆಯ ಎಲ್ಲಾ ಸರ್ಕಾರಿ,ಅನುದಾನಿತ ಹಾಗೂ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರು,ಉಪನ್ಯಾಸಕರು ಹಾಗೂ ಬೋಧಕೇತರ ನೌಕರರು ಸ್ವಯಂ ಪ್ರೇರಿತರಾಗಿ ಆ ದಿನ ಸಾಂದರ್ಭಿಕ ರಜೆ ಹಾಕಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಜರುಗುವ ಬೃಹತ್ ಸಮಾವೇಶದಲ್ಲಿ ಭಾಗಿಯಾಗುವಂತೆ ಮನವಿ ಮಾಡಿದರು.
ಇಡೀ ದೇಶಕ್ಕೆ ಮಾದರಿ ಎನಿಸುವ ಗುಣಮಟ್ಟದ ಶಿಕ್ಷಣ ಹಾಗೂ ಸಿಇಟಿ ಅರ್ಹತಾ ಪರೀಕ್ಷೆಗಳನ್ನು ನಡೆಸಿ ಸೈ ಎನಿಸಿಕೊಂಡ ಪಪೂ ಶಿಕ್ಷಣ ಇಲಾಖೆ ನಮ್ಮದು.ಬದಲಾವಣೆಯ ಹೆಸರಿನಲ್ಲಿ ಪಪೂಶಿ ಇಲಾಖೆಯ ಅಸ್ತಿತ್ವಕ್ಕೆ ದಕ್ಕೆಯಾಗಲಿದೆ. ಅದ್ದರಿಂದ ನಾವುಗಳು ಮೌನವಹಿಸದೆ ಒಗ್ಗಾಟ್ಟಾಗಿ ವಿರೋಧಿಸಬೇಕಿದೆ ಎಂದು ತಿಳಿಸಿ ಜಿಲ್ಲೆಯ ಆರು ತಾಲ್ಲೂಕಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ನೌಕರರನ್ನು ಕರೆ ತರುವ ಜವಾಬ್ದಾರಿಯನ್ನು ಆಯಾ ತಾಲ್ಲೂಕಿನ ಉಪನ್ಯಾಸಕರ ಸಂಘದ ಅಧ್ಯಕ್ಷರಿಗೆ ವಹಿಸಲಾಯಿತು.
ಬೆಂಗಳೂರು ಸಮಾರಂಭದಲ್ಲಿ ಭಾಗವಹಿಸುವ ನೌಕರರು ಆಯಾ ತಾಲ್ಲೂಕು ಅಧ್ಯಕ್ಷರಲ್ಲಿ ತಮ್ಮ ಹೆಸರು ನೋಂದಾಯಿಸುವ ಮೂಲಕ ಒಟ್ಟಿಗೆ ಬೆಂಗಳೂರು ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷರಾದ ಎಲ್.ರಂಗಪ್ಪ ತಿಳಿಸಿದರು.
ಬೆಂಗಳೂರಿಗೆ ಹೋಗಿ ಬರುವ ವಾಹನ,ಉಪಹಾರ ಊಟದ ವ್ಯವಸ್ಥೆ ಜವಾಬ್ದಾರಿಯನ್ನು ಪ್ರಾಚಾರ್ಯರ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಕೆ.ನಾಗಣ್ಣ ಹಾಗೂ ಉಪನ್ಯಾಸಕರ ಸಂಘದ ಕಾರ್ಯಾಧ್ಯಕ್ಷರಾದ ಜಿ.ಎಸ್.ತಿಪ್ಪೇಸ್ವಾಮಿಯವರಿಗೆ ವಹಿಸಲಾಯಿತು.
ಸಭೆಯಲ್ಲಿ ಬೋಧಕೇತರ ಸಂಘದ ಜಿಲ್ಲಾಧ್ಯಕ್ಷ ಟಿ.ದುರುಗೇಶಪ್ಪ,ಜಿಲ್ಲಾ ಉಪನ್ಯಾಸಕರ ಸಂಘದ ಉಪಾಧ್ಯಕ್ಷ ಪಿ.ಕಾಂತರಾಜ್,ಹೊಳಲ್ಕೆರೆ ತಾಲ್ಲೂಕು ಅಧ್ಯಕ್ಷರಾದ ಆರ್.ಚಂದ್ರಶೇಖರ್, ಶಾಖಾಧಿಕಾರಿಗಳಾದ ಟಿ.ಎಂ. ಬಸವಯ್ಯ, ಉಪನ್ಯಾಸಕರಾದ ಡಿ.ಶ್ರೀನಿವಾಸ್, ಪಿ.ಎಂ.ಜಿ.ರಾಜೇಶ್,ಹೆಚ್.ಬಿ. ಬಸವರಾಜ್, ಎಂ.ಜೈಶ್ರೀನಿವಾಸ್, ಎ.ನಾಗರಾಜ್,ವಿ.ಚನ್ನಬಸಪ್ಪ, ಒ.ನಾಗರಾಜ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.