ಇತ್ತಿಚೆಗೆ ವರುಣ ರಾಯ ಕೃಪೆ ತೋರುತ್ತಿದ್ದಾನೆ ಎಂಬಂತೆ ಕಾಣುತ್ತಿದೆ. ಮಳೆ ಅಲ್ಲಲ್ಲಿ ಜೋರಾಗಿದೆ. ಆದರೆ ಈಗ ಬರುತ್ತಿರುವ ಮಳೆಗಾಗಿ ರೈತ ನಿಜಕ್ಕೂ ಕಾಯುತ್ತಿಲ್ಲ. ಈಗ ಮಳೆ ಬಾರದೆ ಇದ್ದರೆ ಸೂಕ್ತ ಎಂದು ಭಾವಿಸುವಾಗಲೇ ಜೋರು ಮಳೆಯಾಗುತ್ತಿದೆ. ಬೆಳೆದ ಬೆಳೆ ಅಷ್ಟೊ ಇಷ್ಟೋ ಕೈಗೆ ಬರುವಾಗ, ಮಳೆರಾಯನಿಂದ ಬೆಳೆಹಾನಿಯಾಗುವ ಸಾಧ್ಯತೆ ಇದೆ. ಭೂಮಿಗೆ ಬೀಜ ಬಿತ್ತಿ, ಅದು ಮೊಳಕೆಯೊಡೆದಾಗ ಬಾರದ ಮಳೆ ಕೈಗೆ ಸಿಗುವ ಬೆಳೆಯನ್ನು ಸರಿಯಾಗಿ ಸಿಗುವುದಕ್ಕೆ ಬಿಡುತ್ತಿಲ್ಲ. ಹೀಗಾಗಿ ಹಿಂಗಾರು ಮಳೆಯಿಂದ ರೈತ ನೊಂದಿದ್ದಾನೆ. ಇನ್ನು ಒಂದು ವಾರಗಳ ಕಾಲ ಅಲ್ಲಲ್ಲಿ ಮಳೆಯಾಗುವ ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ.
ಡಿಸೆಂಬರ್ 5ರ ತನಕ ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂಬ ಮುನ್ಸೂಚನೆ ನೀಡಿದೆ ಹವಮಾನ ಇಲಾಖೆ. ಡಿಸೆಂಬರ್ 1 ರಂದು ಕೂಡ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕೆಲವೊಂದು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ ಎಂಬ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ತುಮಕೂರು ವಿಜಯನಗರಗಳಲ್ಲಿ ಮಳೆ ಸಾಧ್ಯತೆ ಇದೆ. ಸದ್ಯಕ್ಕೆ ಬೆಳೆ ಕೊಯ್ಲು ಮಾಡುವ ಸಮಯ. ಕೊಯ್ದು ಒಣಗಿಸಬೇಕು ಎನ್ನುವಾಗಲೇ ಎಷ್ಟೋ ಕಡೆ ಮಳೆ ಬಂದಿದೆ. ಕೊಯ್ದು ಕಣಕ್ಕೆ ಹಾಕಿರುವ ಬೆಳೆಯ ಮೇಲೂ ಎಷ್ಟೊ ಕಡೆ ವರುಣರಾಯ ಮಿಂದೆದ್ದು ಹೋಗಿದ್ದಾನೆ.