ವಿಜಯಪುರ: ವಿ ಸೋಮಣ್ಣ ಸದ್ಯ ಬಿಜೆಪಿ ಪಕ್ಷದಲ್ಲಿ ಮುನಿಸಿಕೊಂಡಿದ್ದಾರೆ. ಇನ್ನು ಸ್ವಲ್ಪದರಲ್ಲಿಯೇ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಈ ಬೆನ್ನಲ್ಲೇ ಸಚಿವ ಎಂ ಬಿ ಪಾಟೀಲ್, ವಿ ಸೋಮಣ್ಣ ಪರ ಮಾತನಾಡಿದ್ದಾರೆ. ಸೋಮಣ್ಣ ಅವರನ್ನು ಎರಡೆರಡು ಕ್ಷೇತ್ರಗಳಲ್ಲಿ ನಿಲ್ಲಿಸಿ ಬಲಿ ಪಶು ಮಾಡಿದ್ದಾರೆ ಎಂದಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಹಿರಿಯ ನಾಯಕ ವಿ ಸೋಮಣ್ಣ ಅಸಮಾಧಾನಗೊಂಡಿರುವುದು ಸ್ವಾಭಾವಿಕ. ಎರಡು ಕಡೆಗಳಲ್ಲೂ ಅವರು ಹೀನಾಯವಾಗಿ ಸೋಲು ಕಂಡರು. ಗೋವಿಂದರಾಜ ನಗರದಲ್ಲಿ ಅವರು ಸ್ಪರ್ಧಿಸಿದ್ದರೆ ಗೆಲ್ಲುತ್ತಿರಲಿಲ್ಲ. ಆದರೆ ಸೋಲು ಅಷ್ಟು ಹೀನಾಯವಾಗುತ್ತಿರಲಿಲ್ಲ. ಸೋಮಣ್ಣ ಅವರು ಕಾಂಗ್ರೆಸ್ ಸೇರುವುದಕ್ಕೆ ಬಯಸಿದರೆ, ಸೇರಿಸಿಕೊಳ್ಳುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದಿದ್ದಾರೆ.
ನನ್ನೊಂದಿಗೆ, ಕೆಪಿಸಿಸಿ ಅಧ್ಯಕ್ಷರೊಂದಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಹಲವರು ಸಂಪರ್ಕದಲ್ಲಿದ್ದಾರೆ. ಲೋಕಸಭಾ ಚುನಾವಣೆಯ ಮೊದಲು ಅಥವಾ ಬಳಿಕ ರಾಜ್ಯ ರಾಜಕಾರಣದಲ್ಲಿ ಜೋರು ಬದಲಾವಣೆ ನಡೆಯಲಿದೆ. ಈ ಬಗ್ಗೆ ಸಿಎಂ ಜೊತೆ ಚರ್ಚಿಸಿದ ಬಳಿಕ ನನ್ನ ಅಧಿಕೃತ ನಿಲುವು ಸ್ಪಷ್ಟಪಡಿಸುತ್ತೇನೆ.ಇನ್ನುಳಿದಂತೆ ಜಾತಿಗಣತಿ ವರದಿ ಮಂಡನೆಯಿಂದ ಜಾತಿಗಳ ನಡುವೆ ಸಂಘರ್ಷ ವಿಚಾರ ‘ಅದು ಏನೇ ಇದ್ದರೂ ಪಕ್ಷ ಹಾಗೂ ಸರ್ಕಾರದ ಚೌಕಟ್ಟಿನಲ್ಲಿ ಮಾತನಾಡುತ್ತೇವೆ ಎಂದು ಜಾತಿಗಣತಿ ವಿಚಾರದ ಬಗ್ಗೆ ಮಾತನಾಡಿದ್ದಾರೆ.