ಬೆಂಗಳೂರು: ಸದ್ಯ ರಾಜ್ಯದಲ್ಲಿ ಬಹುಮತ ಪಡೆದು ಕಾಂಗ್ರೆಸ್ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದಿದೆ. ಸಿದ್ದರಾಮಯ್ಯ ಸಂಪುಟವೂ ತುಂಬಿದೆ. ಆದರೆ ಈಗಲೂ ಅಸಮಾಧಾನಿತರು ಕಾಣಸಿಗುತ್ತಾರೆ. ಎಲ್ಲರಿಗೂ ಸಚಿವ ಸ್ಥಾನ ಕೊಡಲು ಕಷ್ಟ ಸಾಧ್ಯ ಎಂಬ ಕಾರಣಕ್ಕೇನೆ ನಿಗಮ ಮಂಡಳಿಗಳಲ್ಲಿ ಸ್ಥಾನಮಾನ ನೀಡಲಾಗುತ್ತದೆ. ಇದೀಗ ಅದೇ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಜಟಾಪಟಿ ನಡೆಯುತ್ತಿದೆ.
ಶಾಸಕರು ಮತ್ತು ಎಂಎಲ್ಸಿಗಳನ್ನು ಆಯ್ಕೆ ಮಾಡಲು ಸಿದ್ದರಾಮಯ್ಯ ಲೀಸ್ಟ್ ಹಿಡಿದು ಕುಳಿತುಕೊಂಡರೆ, ಕಾರ್ಯಕರ್ತರಿಗೆ ನೀಡಬೇಕೆಂದು ಡಿಕೆ ಶಿವಕುಮಾರ್ ಪಟ್ಟು ಹಿಡಿದು ಕೂತಿದ್ದಾರೆ. ಇಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲ್ ಬೆಂಗಳೂರಿಗೆ ಭೇಟಿ ನೀಡಿದ್ದು, ಸಭೆಯಲ್ಲಿ ಈ ಸಂಬಂಧ ಚರ್ಚೆ ಮಾಡುವ ಸಾಧ್ಯತೆ ಇದೆ.
ಈ ಸಂಬಂಧ ಮಾತನಾಡಿರುವ ಸಿಎಂ ಸಿದ್ದರಾಮಯ್ಯ ಅವರು, ಮೊದಲ ಹಂತದಲ್ಲಿ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಆದ್ಯತೆ ನೀಡುವಂತೆ ಪ್ರಸ್ತಾಪ ಮಾಡುತ್ತೇನೆ ಎಂದಿದ್ದಾರೆ. ಇದೆ ವೇಳೆ ಬರ ಪರಿಹಾರದ ವಿಚಾರವಾಗಿ ಕುಮಾರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿದ್ದು, ಕುಮಾರಸ್ವಾಮಿಗೆ ಏನು ಗೊತ್ತಿಲ್ಲ. 800 ಕೋಟಿ ಹಣ ಹೆಚ್ಚಿಗೆ ಇದೆ. ಅದನ್ನು ಬಿಡುಗಡೆ ಮಾಡಿದ್ದೇವೆ. ಕೇಂದ್ರದಿಂದ ಕೂಡ ಪರಿಹಾರ ಕೇಳಿದ್ದೇವೆ, ಆದರೆ ಆ ಕಡೆಯಿಂದ ಇನ್ನು ಬಿಡುಗಡೆಯಾಗಿಲ್ಲ ಎಂದಿದ್ದಾರೆ.