ಸುದ್ದಿಒನ್, ಚಿತ್ರದುರ್ಗ, ನವೆಂಬರ್.21 :ಪ್ರಕೃತಿ ಶಾಲೆಯು ಸರ್ಕಾರಿ ಶಾಲೆಗಳಿಗೆ ಹಾಗೂ ಸಾರ್ವಜನಿಕರಿಗೆ ಟೆಲಿಸ್ಕೋಪ್ ಮುಖಾಂತರ ಆಕಾಶ ವೀಕ್ಷಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಕೆಲಸ” ಎಂದು ಶ್ರೀ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಯವರು ವ್ಯಕ್ತಪಡಿಸಿದರು.
ನಗರದ ಬಿ. ಎಲ್.ಗೌಡ ಲೇಔಟ್ ನಲ್ಲಿರುವ ಪ್ರಕೃತಿ ಶಾಲೆಯಲ್ಲಿ ನಡೆದ “ಪ್ರಕೃತಿಯಿಂದ ಬಾನದಾರಿಗೆ” ಆಕಾಶ ವೀಕ್ಷಣೆ ಕಾರ್ಯಕ್ರಮದಲ್ಲಿ ನೂತನ ಟೆಲಿಸ್ಕೋಪ್ ಉದ್ಘಾಟಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಾಲೆಯ ಆಡಳಿತ ಮಂಡಳಿಯವರು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಈ ರೀತಿಯ ವಿಶೇಷ ಕಾರ್ಯಕ್ರಮ ಆಯೋಜಿಸುವ ಮೂಲಕ ಮಕ್ಕಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತು ಆಸಕ್ತಿ ಹೆಚ್ಚಿಸುವ ಕಾರ್ಯವನ್ನು ಮಾಡುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ
ಉಪನಿರ್ದೇಶಕರಾದ ರವಿಶಂಕರ ರೆಡ್ಡಿ ಅವರು ಮಾತನಾಡಿ ಪ್ರಕೃತಿ ಶಾಲೆಯವರು ಅದ್ಭುತ ಕಾರ್ಯಕ್ರಮವನ್ನು ಆಯೋಜಿಸಿದ್ದು ಒಳ್ಳೆಯ ಶಿಕ್ಷಣ ಕೊಡುವ ಶಾಲೆಗಳಿಗೆ ತಮ್ಮ ಸಹಕಾರ ಸದಾ ಇರುತ್ತದೆ ಎಂಬ ಭರವಸೆಯ ಮಾತುಗಳನ್ನು ಆಡಿದರು.
ಆಕಾಶ ವೀಕ್ಷಣೆ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದ ಹೆಚ್.ಎಸ್.ಟಿ. ಸ್ವಾಮಿರವರು ಮಾತನಾಡಿ, ಇದೊಂದು ವಿಶೇಷ ಕಾರ್ಯಕ್ರಮವಾಗಿದ್ದು ಎಲ್ಲಾ ಶಾಲೆಯವರು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಖಗೋಳ ಶಾಸ್ತ್ರದ ಬಗ್ಗೆ ಮಕ್ಕಳಿಗೆ ಆಸಕ್ತಿ ಉಂಟುಮಾಡುವ ಕೆಲಸವನ್ನು ಮಾಡಬೇಕು ಹಾಗೂ ಪೋಷಕರು ಇಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ ರವೀಂದ್ರರವರು ಮಾತನಾಡಿ, ಸಾರ್ವಜನಿಕರಿಗೋಸ್ಕರ ಏರ್ಪಡಿಸಲಾಗಿದ್ದ ಈ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿರುತ್ತದೆ. ಇದೇ ರೀತಿ ಮುಂದೆಯೂ ಸಹ ಪ್ರೋತ್ಸಾಹ ನೀಡಬೇಕೆಂದು ತಮ್ಮ ಸಂತೋಷದ ನುಡಿಗಳನ್ನು ತಿಳಿಸಿದರು.
ಶಾಲೆಯ ಕಾರ್ಯದರ್ಶಿ ಎಂ. ಕಾರ್ತಿಕ್ ರವರು ಮಾತನಾಡಿ ಈ ನೂತನ ಬೃಹತ್ ಟೆಲಿಸ್ಕೋಪ್ ಕೇವಲ ಪ್ರಕೃತಿ ಶಾಲೆಗೆ ಸೀಮಿತವಾಗದೆ ಇತರೆ ಶಾಲೆಗಳಿಗೆ ಸರ್ಕಾರಿ ಶಾಲೆಗಳಿಗೆ ಅಂಗನವಾಡಿ ಮಕ್ಕಳಿಗೆ ಅವಕಾಶ ವಂಚಿತರಿಗೆ ಉಪಯೋಗವಾಗಲೆಂದು ಈ ಒಂದು ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಸುಮಾರು 2 ಸಾವಿರಕ್ಕೂ ಹೆಚ್ಚು ಮಕ್ಕಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದು ತುಂಬಾ ಸಂತೋಷ ತಂದಿದೆ.
ಈ ಕಾರ್ಯಕ್ರಮದಲ್ಲಿ ಬೃಹತ್ ಟೆಲಿಸ್ಕೋಪ್ ಮುಖಾಂತರ ಚಂದ್ರ, ಶನಿ ಗ್ರಹ, ಗುರು ಗ್ರಹ ಹಾಗೂ ಬಹು ದೂರದ ನಕ್ಷತ್ರಗಳನ್ನು ಹತ್ತಿರದಿಂದ ನೋಡುವ ಸದಾ ಅವಕಾಶವನ್ನು ಸಾರ್ವಜನಿಕರು ಒಳ್ಳೆಯ ರೀತಿಯಲ್ಲಿ ಸಹಕರಿಸಿ ಉಪಯೋಗ ಪಡೆದುಕೊಂಡಿರುತ್ತಾರೆ.
ಕಾರ್ಯಕ್ರಮಕ್ಕೆ ಬಂದಂತಹ ಎಲ್ಲಾ ಅತಿಥಿಗಳಿಗೂ ಹಾಗೂ ಸಾರ್ವಜನಿಕರಿಗೂ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಿದ ಸರ್ವರಿಗೂ ವಂದನೆಗಳನ್ನು ತಿಳಿಸಿರುತ್ತಾರೆ.
ಪ್ರಕೃತಿ ಶಾಲೆಯ ಆಡಳಿತ ಮಂಡಳಿಯವರು ಶಿಕ್ಷಕ ಹಾಗೂ ಶಿಕ್ಷಕೇತರ ವರ್ಗದವರು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.