ಹಾಸನ: ಇಂದು ಜೆಡಿಎಸ್ ಮಾಜಿ ಶಾಸಕ ಗೌರಿಶಂಕರ್ ಹಾಗೂ ಮಂಜುನಾಥ್ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರೇ ಬರಮಾಡಿಕೊಂಡಿದ್ದಾರೆ. ಈ ವಿಚಾರಕ್ಕೆ ಸಚಿವ ಕೆ ಎನ್ ರಾಜಣ್ಣ ಅಸಮಾಧಾನ ಹೊರ ಹಾಕಿದ್ದಾರೆ.
ಇಂದು ಹಾಸನಾಂಬೆಯ ಬಾಗಿಲನ್ನು ಮುಚ್ಚಲಾಗಿದೆ. ಮುಂದಿನ ವರ್ಷಕ್ಕಷ್ಟೇ ದರ್ಶನದ ಭಾಗ್ಯ ಸಿಗುವುದು. ಕೊನೆಯ ಪೂಜೆಯಲ್ಲಿ ಭಾಗಿಯಾಗಿದ್ದ ಸಚಿವ ಕೆ ಎನ್ ರಾಜಣ್ಣ, ಗೌರಿಶಂಕರ್ ಸೇರ್ಪಡೆ ಬಗ್ಗೆ ಮಾತನಾಡಿದ್ದಾರೆ. ನಮ್ಮ ಗಮನಕ್ಕೆ ಬಾರದೆ ಗೌರಿ ಶಂಕರ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿರುವುದು ಅಸಮಾಧಾನವಿದೆ. ಜಿಲ್ಲೆಯ ಯಾವ ನಾಯಕರನ್ನು ಸಂಪರ್ಕಿಸದೆ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಇದಕ್ಕೆ ಅಸಮಾಧಾನವಿದೆ ಎಂದಿದ್ದಾರೆ.
ತುಮಕೂರಿನ ಜಿಲ್ಲಾ ಅಧ್ಯಕ್ಷರಿಗೂ ಮಾಹಿತಿ ಇಲ್ಲ. ನನಗಾಗಲೀ, ಜಿ ಪರಮೇಶ್ವರ್ ಗಾಗಲೀ ಯಾವುದೇ ಮಾಹಿತಿ ಇಲ್ಲ. ಜಿಲ್ಲೆಯಲ್ಲಿ ಏನೇ ಆದರೂ ನನಗೂ, ಜಿ ಪರಮೇಶ್ವರ್ ಗೂ ನಿಭಾಯಿಸುವ ಶಕ್ತಿ ಜನ ನೀಡಿದ್ದಾರೆ. ಎಂಥಹ ಸಂಧರ್ಭವೇ ಬಂದರೂ ನಿಭಾಯಿಸುತ್ತೇವೆ. ನಾವೇನು ಅಶಕ್ತರಲ್ಲ. ಕಾಂಗ್ರೆಸ್ ಸಮುದ್ರವಿದ್ದಂತೆ. ಸಮುದ್ರದಲ್ಲಿ ಗಂಗಾ ಮಾತೆಯಂತೆ ಪವಿತ್ರಜಲವೂ ಬರುತ್ತದೆ, ಚರಂಡಿಯ ನೀರು ಬರುತ್ತದೆ. ಸಮುದ್ರದಲ್ಲಿ ಅಮೃತವೂ ಇರುತ್ತದೆ, ವಿಷವೂ ಬರುತ್ತದೆ. ಅಮೃತ ಸಿಗುವವರಿಗೆ ಅಮೃತ, ವಿಷ ಸಿಗುವವರಿಗೆ ವಿಷ ಸಿಗುತ್ತದೆ ಎಂದಿದ್ದಾರೆ.
ತುಮಕೂರು ಗ್ರಾಮಾಂತರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ನೇರಾ ನೇರ ಫೈಟ್ ಇತ್ತು. ಲೋಕಸಭೆಯಲ್ಲಿ ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡ ಕಾರಣ ಜೆಡಿಎಸ್ ಮಾಜಿ ಶಾಸಕ ಕಾಂಗ್ರೆಸ್ ಸೇರಿದ್ದಾರೆ. ಇನ್ಮುಂದೆ ತುಮಕೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ವರ್ಸಸ್ ಬಿಜೆಪಿ ಫೈಟ್ ನಡೆಯಬಹುದು.