ದೀಪಾವಳಿ ಅಲಂಕಾರಕ್ಕೆ ಅಕ್ರಮ ವಿದ್ಯುತ್ : ಕುಮಾರಸ್ವಾಮಿ ಮನೆಯ ವಿಡಿಯೋ ಹಾಕಿ ಕಾಂಗ್ರೆಸ್ ಟೀಕೆ

1 Min Read

ಬೆಂಗಳೂರು: ದೀಪಾವಳಿ ಹಬ್ಬದ ದಿನ ಮನೆ ತುಂಬ ದೀಪಗಳಿಂದ ಕಂಗೊಳಿಸುತ್ತದೆ. ಅದರಂತೆ‌ ಮಾಜಿ ಸಿಎಂ ಕುಮಾರಸ್ವಾಮಿ ಅವರು ದೀಪಾವಳಿ ಪ್ರಯುಕ್ತ ಇಡೀ ಮನೆಗೆ ದೀಪದ ಲೈಟಿಂಗ್ಸ್ ಬಿಡಿಸಿದ್ದಾರೆ. ಇದಕ್ಕೆ ವಿದ್ಯುತ್ ಅನ್ನು ಕದ್ದಿದ್ದಾರೆ ಎಂದು ಕಾಂಗ್ರೆಸ್ ಟೀಕೆ ಮಾಡಿದೆ.

‘ಜಗತ್ತಿನ ಏಕೈಕ ಮಹಾಪ್ರಾಮಾಣಿಕ ಹೆಚ್.ಡಿ ಕುಮಾರಸ್ವಾಮಿಯವರ ಜೆ ಪಿ ನಗರದ ನಿವಾಸದ ದೀಪಾವಳಿಯ ದೀಪಾಲಂಕಾರಕ್ಕೆ ನೇರವಾಗಿ ವಿದ್ಯುತ್ ಕಂಬದಿಂದ ಅಕ್ರಮ ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ಒಬ್ಬ ಮಾಜಿ ಸಿಎಂ ಆಗಿ ವಿದ್ಯುತ್ ಕಳ್ಳತನ ಮಾಡುವ ದಾರಿದ್ರ್ಯ ಬಂದಿದ್ದು ದುರಂತ!
@hd_kumaraswamy ಅವರೇ ನಮ್ಮ ಸರ್ಕಾರ ಗೃಹಜ್ಯೋತಿಯಲ್ಲಿ 200 ಯೂನಿಟ್ ಉಚಿತ ಕೊಡುತ್ತಿದೆಯೇ ಹೊರತು 2000 ಯೂನಿಟ್ ಅಲ್ಲ! ತಮಗೆ ಅಷ್ಟೊಂದು ದಾರಿದ್ರ್ಯ ಬಂದಿದ್ದರೆ ಗೃಹಜ್ಯೋತಿ ಯೋಜನೆಗೆ ಒಂದು ಅರ್ಜಿ ಹಾಕಬಹುದಿತ್ತಲ್ಲ.

 

ಒಹ್, ತಿಳಿದಿರಲಿಲ್ಲ ಗೃಹಜ್ಯೋತಿಯಲ್ಲಿ ಒಬ್ಬರಿಗೆ ಒಂದೇ ಮೀಟರ್ ಗೆ ಅವಕಾಶವಿದೆ, ತಮ್ಮ ಹೆಸರಲ್ಲಿ ಹಲವು ಮೀಟರ್ ಗಳಿವೆಯಲ್ಲವೇ! ರಾಜ್ಯದ ವಿದ್ಯುತ್ ಕೊರತೆಯ ನಡುವೆಯೂ ರೈತರಿಗೆ 7 ಗಂಟೆ ವಿದ್ಯುತ್ ಕೊಡುವ ಕ್ರಮ ಕೈಗೊಂಡಿದ್ದರೂ ಪುಂಖಾನುಪುಂಕವಾಗಿ ಮಾತಾನಾಡುವ ತಾವು ಇಂತಹ ಚೀಪ್ ಕಳ್ಳತನಕ್ಕೆ ಇಳಿಯುವಷ್ಟು “ಬರ” ಎದುರಿಸುತ್ತಿದ್ದೀರಾ?.

 

ಅದೇನೋ ಪತ್ರಿಕಾಗೋಷ್ಠಿ ನಡೆಸಿ “ಕರ್ನಾಟಕ ಕತ್ತಲಲ್ಲಿದೆ“ ಎನ್ನುತ್ತಾ ಬಡಬಡಿಸಿದ್ದಿರಲ್ಲವೇ, ಈಗ ಕದ್ದ ವಿದ್ಯುತ್ತಿನಲ್ಲಿ ನಿಮ್ಮ ಮನೆಗೆ ಬೆಳಕು ಮಾಡಿಕೊಂಡಿದ್ದೀರಿ, ನಿಮ್ಮ ಮನೆ ಹೀಗೆ ಜಗಮಗ ಹೊಳೆಯುತ್ತಿರುವಾಗ ಅದ್ಯಾವ ಬಾಯಲ್ಲಿ ಕರ್ನಾಟಕ ಕತ್ತಲಲ್ಲಿದೆ ಎನ್ನುವಿರಿ ಸ್ವಾಮಿ?! ನಿಮ್ಮದೇ ಶೈಲಿಯ ಪ್ರಶ್ನೆ ಕೇಳಬೇಕೆಂದರೆ,
ರಾಜ್ಯ ಬರ ಎದುರಿಸುತ್ತಿರುವಾಗ ನಿಮ್ಮ ಮನೆ ಮಾತ್ರ ಜಗಮಗಿಸಬೇಕೆ? ರೈತರ ಪಾಲಿನ ವಿದ್ಯುತ್ ಕಳ್ಳತನ ಮಾಡಿ ಮೋಜು ಮಾಡಬೇಕೆ?.ನಿಮ್ಮ ಮನೆಯ ದೀಪಾವಳಿಗೆ ರಾಜ್ಯದ ಜನರ “ದಿವಾಳಿ”ಯನ್ನು ಬಯಸುತ್ತಿದ್ದೀರಾ? ವಿದ್ಯುತ್ತನ್ನೇ ಬಿಡದೆ ಲೂಟಿ ಮಾಡುವ ತಾವು ರಾಜ್ಯವನ್ನು ಇನ್ನೆಷ್ಟು ಲೂಟಿ ಮಾಡಿರಬಹುದು? ಎಂದು ಪ್ರಶ್ನಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *