ಚಿತ್ರದುರ್ಗ ನ. 12 : ದೀಪಾವಳಿ ಹಬ್ಬದ ನಿಮಿತ್ತ ಚಿತ್ರದುರ್ಗ ನಗರದ ಸರ್ಕಾರಿ ಮಾಧ್ಯಮಿಕ ಶಾಲಾ ಮೈದಾನ (ಪ್ರವಾಸಿಮಂದಿರ ಎದುರು) ಆವರಣದ ಮಳಿಗೆಗಳಲ್ಲಿ ಮಾರಾಟ ಮಾಡಲಾಗುತ್ತಿದ್ದ ನಿಷೇಧಿತ ಪಟಾಕಿಗಳನ್ನು ಅಧಿಕಾರಿಗಳ ತಂಡ ವಶಕ್ಕೆ ಪಡೆದುಕೊಂಡಿದ್ದು ಕಡ್ಡಾಯವಾಗಿ ಹಸಿರು ಪಟಾಕಿ ಗಳನ್ನು ಮಾತ್ರ ಮಾರಾಟ ಮಾಡಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಸೂಚನೆ ನೀಡಿದ್ದಾರೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಹೊರತುಪಡಿಸಿ ಉಳಿದ ಪಟಾಕಿಗಳ ಮಾರಾಟ ಮತ್ತು ಬಳಕೆಗೆ ಸರ್ಕಾರ ನಿಷೇಧಿಸಿದ್ದು, ಪಟಾಕಿ ಮಾರಾಟಗಾರರಿಗೆ ಈ ಬಗ್ಗೆ ಈಗಾಗಲೆ ತಿಳುವಳಿಕೆ ನೀಡಲಾಗಿದೆ. ಉಪವಿಭಾಗಾಧಿಕಾರಿ ಕಾರ್ತಿಕ್ ಅವರ ನೇತೃತ್ವದಲ್ಲಿ ವಿವಿಧ ಅಧಿಕಾರಿಗಳ ತಂಡ ನಗರದ ಸರ್ಕಾರಿ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಪಟಾಕಿ ಮಾರಾಟ ಮಾಡುತ್ತಿದ್ದ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು ನಿಷೇಧಿತ ಪಟಾಕಿ ಮಾರಾಟ ಮಾಡುತ್ತಿದ್ದುದನ್ನು ಗಮನಿಸಿದೆ. ನಿಷೇಧಿತ ಪಟಾಕಿಗಳನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು, ಸೂಕ್ತ ಕ್ರಮ ಕೈಗೊಂಡಿದ್ದಾರೆ.
ಉಪವಿಭಾಗಾಧಿಕಾರಿ ಕಾರ್ತಿಕ್, ತಹಸಿಲ್ದಾರ್ ನಾಗವೇಣಿ, ನಗರಸಭೆ ಪೌರಾಯುಕ್ತೆ ರೇಣುಕಾ ಸೇರಿದಂತೆ ವಿವಿಧ ಅಧಿಕಾರಿಗಳು ಪಟಾಕಿ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದ್ದು, ಈ ದಿಸೆಯಲ್ಲಿ ಸರ್ಕಾರ ಪರಿಸರಕ್ಕೆ ಮಾರಕವಾದ ಪಟಾಕಿ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದ್ದು, ಎಲ್ಲರೂ ತಪ್ಪದೆ ಹಸಿರು ಪಟಾಕಿಯ ಪಾಕೆಟ್ ಗಳ ಮೇಲೆ ಲೋಗೋ ಹಾಗೂ ಪ್ರಮಾಣ ಪತ್ರ ಇರುವುದನ್ನು ಖಚಿತಪಡಿಸಿಕೊಂಡೇ ಖರೀದಿಸಬೇಕು, ಪಟಾಕಿ ಮಾರಾಟಗಾರರೂ ಕೂಡ ಹಸಿರು ಪಟಾಕಿಯನ್ನು ಮತ್ರ ಮಾರಾಟ ಮಾಡಬೇಕು, ಅಧಿಕಾರಿಗಳು ಮಾರಾಟ ಮಳಿಗೆಗೆ ಆಕಸ್ಮಿಕ ಭೇಟಿ ನೀಡಿ ಪರಿಶೀಲಿಸಲಿದ್ದು, ನಿಷೇಧಿತ ಪಟಾಕಿ ಕಂಡುಬಂದಲ್ಲಿ ವಶಕ್ಕೆ ಪಡೆದು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಎಲ್ಲ ಸಾರ್ವಜನಿಕರು ಹಾಗೂ ಪಟಾಕಿ ಮಾರಾಟಗಾರರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ತಿಳಿಸಿದ್ದಾರೆ.