ಧಾರವಾಡ: ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ಶಾಸಕರು ಪತ್ರ ಬರೆದಿದ್ದಾರೆಂದು ಸಾಕಷ್ಟು ಚರ್ಚೆಯಾಗಿತ್ತು. ಇದೀಗ ಆ ಪತ್ರಕ್ಕೆ ಸಂಬಂಧಿಸಿದಂತೆ ಶಾಸಕ ಬಿ ಆರ್ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. ಅಭಿವೃದ್ಧಿ ಆಗುತ್ತಿಲ್ಲ ಎಂದು ಪತ್ರ ಬರೆದಿದ್ದು ನಾನೆ, ಆದರೆ ಆ ಪತ್ರ ಇಂದಿನದ್ದಲ್ಲ ಎಂದು ತಿಳಿಸಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಬಿ ಆರ್ ಪಾಟೀಲ್, ನಾನು ಒಬ್ಬನಲ್ಲ, ನಾವೂ ಮೂವರು ಸೇರಿದಂತೆ ಅನೇಕರು ಸೇರಿ ಪತ್ರ ಬರೆದಿದ್ದೆವು. ಆ ಪತ್ರದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯಿರಿ ಎಂದು ಹೇಳಿದ್ದೆವು. ಆ ಪತ್ರ ಬರೆದಿದ್ದರಲ್ಲಿ ಅಸಮಾಧಾನ, ಅತೃಪ್ತಿ ಇರಲಿಲ್ಲ. ಆದರೆ ಸಭೆ ಕರೆಯಿರಿ ಎಂದು ಹೇಳಿದ್ದೆವು ಅಷ್ಟೆ. ಹಳೇ ದಿನಾಂಕದ ಲೆಡರ್ ಹೆಡ್ ಈಗ ದುರ್ಬಳಕೆ ಆಗಿದೆ. ತಮಗೆ ಬೇಕಾದಂತೆ ಬರೆದುಕೊಂಡು ಪತ್ರ ವೈರಲ್ ಮಾಡುತ್ತಾ ಇದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಸರ್ಕಾರದ ಗ್ಯಾರಂಟಿಗಳಿಗೇನೆ ಈ ವರ್ಷ 56 ಸಾವಿರ ಕೋಟಿ ಬೇಕು. ಅಭಿವೃದ್ಧಿ ಕೆಲಸಗಳಿಗೆ ಹಣದ ಕೊರತೆ ಇದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ ಹಣ ಸಿಗುತ್ತದೆ ಎಂದಿದ್ದಾರೆ. ಇದೆ ವೇಳೆ, ಲಿಂಗಾಯತರನ್ನು ಕಡೆಗಣನೆ ಮಾಡಲಾಗುತ್ತಿದೆ ಎಂಬ ಆರೋಪದ ಬಗ್ಗೆ ಮಾತನಾಡಿ, ಬಿಜೆಪಿಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಸ್ಥಿತಿ ಏನಾಗಿದೆ. ಕಾಂಗ್ರೆಸ್ ನಲ್ಲಿ ಲಿಂಗಾಯತರು ಗಟ್ಟಿಯಾಗಿದ್ದೇವೆ. ಸಿದ್ದರಾಮಯ್ಯ ಅವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ ಎಂದು ಲಿಂಗಾಯತ ಸಮುದಾಯದ ಬಗ್ಗೆ ಎದ್ದಿದ್ದ ಬೇಸರಕ್ಕೆ ಸ್ಪಷ್ಟನೆ ನೀಡಿದ್ದಾರೆ.